ADVERTISEMENT

#MeToo: ನಾನ್ಯಾಕೆ ಕ್ಷಮೆ ಕೇಳಲಿ, ಆ ಪ್ರಶ್ನೆಯೇ ಇಲ್ಲ; ಶ್ರುತಿ ಹರಿಹರನ್

ಪಟ್ಟು ಬಿಡದ ಅರ್ಜುನ್ ಸರ್ಜಾ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 18:26 IST
Last Updated 25 ಅಕ್ಟೋಬರ್ 2018, 18:26 IST
   

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಮೀ–ಟೂ’ ಅಭಿಯಾನದ ಬಿರುಗಾಳಿ ಎಬ್ಬಿಸಿರುವ ನಟಿ ಶ್ರುತಿ ಹರಿಹರನ್‌ ಹಾಗೂ ಆರೋಪಕ್ಕೆ ಗುರಿಯಾಗಿರುವ ನಟ ಅರ್ಜುನ್ ಸರ್ಜಾ ತಮ್ಮ ನಿಲುವಿಗೆ ಪಟ್ಟು ಹಿಡಿದಿದ್ದು, ಇಬ್ಬರ ಮಧ್ಯೆ ‘ರಾಜಿ’ ಮಾಡಿಸುವ ಹಿರಿಯ ನಟ ಅಂಬರೀಷ್ ಯತ್ನ ಫಲ ಕೊಟ್ಟಿಲ್ಲ.

ಸರ್ಜಾ ಅವರ ಮಾವ, ಹಿರಿಯ ನಟ ರಾಜೇಶ್ ಅವರ ದೂರಿನ ಮೇರೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಗುರುವಾರ ಸಭೆ ಆಯೋಜಿಸಿತ್ತು. ಇದು ಇಬ್ಬರ ಮಧ್ಯೆ ಸಂಧಾನ ಎಂದು ಹೇಳಲಾಗಿತ್ತು. ಸಭೆಯ ಮುಂದಾಳತ್ವ ವಹಿಸಿದ್ದ ಅಂಬರೀಷ್‌, ಶ್ರುತಿ ಮತ್ತು ಸರ್ಜಾ ಅವರ ಜತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಆದರೆ, ಇಬ್ಬರೂ ತಮ್ಮ ಪಟ್ಟು ಸಡಿಲಿಸಲಿಲ್ಲ.

‘ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಸರ್ಜಾ ಹೇಳಿದರು. ‘ನಾಳೆ ಬೆಳಿಗ್ಗೆವರೆಗೆ ಕಾದು ನಿರ್ಧರಿಸುತ್ತೇನೆ’ ಶ್ರುತಿ ತಿಳಿಸಿದರು.

ADVERTISEMENT

‘ಸರ್ಜಾ ಅವರು ನನ್ನ ಮೇಲೆ ಎರಡು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹೋರಾಡುವುದಕ್ಕೆ ನನಗೆ ಹೆಮ್ಮೆಯಿದೆ. ವಾಣಿಜ್ಯ ಮಂಡಳಿಯವರು ನಾಳೆ ಬೆಳಿಗ್ಗೆವರೆಗೆ ಕಾದು ನೋಡುವಂತೆ ಹೇಳಿದ್ದಾರೆ. ಹಾಗೇ ಮಾಡುತ್ತೇನೆ. ವಾಣಿಜ್ಯ ಮಂಡಳಿ ಮೇಲೆ ಗೌರವ ಇದ್ದ ಕಾರಣ ಇಂದು ಸಭೆಗೆ ಬಂದಿದ್ದೇನೆ. ಹೇಳಿಕೊಂಡವರನ್ನೇ ತಪ್ಪಿತಸ್ಥರೆಂಬಂತೆ ನೋಡುತ್ತಿರುವುದು ಸಲ್ಲದು. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಶ್ರುತಿ ಖಡಾಖಂಡಿತವಾಗಿ ಹೇಳಿದರು.

‘ಮಾಧ್ಯಮಗಳ ಮುಂದೆ ಹೋಗುವ ಮುನ್ನ ಇಲ್ಲಿಯೇ ಬರಬಹುದಿತ್ತಲ್ಲವೇ’ ಎಂಬ ಪ್ರಶ್ನೆಗೆ ‘ಇದು ಅಪ್ರಸ್ತುತ’ ಎಂದು ಹೇಳಿ ಪತ್ರಿಕಾಗೋಷ್ಠಿಯಿಂದ ಹೊರ ನಡೆದರು.

ಇದಕ್ಕೂ ಮುನ್ನ ಮಾತನಾಡಿದ ಅರ್ಜುನ್‌ ಸರ್ಜಾ, ‘ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಹಾಗೇನಾದರೂ ಮಾಡಿದರೆ ನಾನು ತಪ್ಪಿತಸ್ಥ ಎಂದಾಗುತ್ತದೆ. ಕಾಲವೇ ಇದಕ್ಕೆ ನ್ಯಾಯ ಕೊಡಲಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಕಾನೂನು ಎಲ್ಲರಿಗೂ ಒಂದೇ’ ಎಂದು ಭಾವಾವೇಶದಿಂದ ಹೇಳಿದರು.

‘ಇದು ನನ್ನೊಬ್ಬನ ವಿಚಾರ ಅಲ್ಲ. ನನ್ನ ಕುಟುಂಬ, ಕರ್ನಾಟಕ, ತಮಿಳುನಾಡು, ಕೇರಳದ ನನ್ನ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಶೀಘ್ರವೇ ಗೊತ್ತಾಗಲಿದೆ’ ಎಂದರು.

‘ಮೀ–ಟೂ ಒಳ್ಳೆಯ ವೇದಿಕೆ. ಆದರೆ ಇದನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು. ಯಾರದೇ ತೇಜೋವಧೆಗೆ ಬಳಸಬಾರದು. ನಾನೂ ಮಹಿಳೆಯರ ಪರ ಸಾಕಷ್ಟು ಕೆಲಸ ಮಾಡಿದ್ದೇನೆ. ಅದೆಲ್ಲವನ್ನೂ ಈಗ ಹೇಳಲಾಗದು’ ಎಂದರು.

‘ಇಲ್ಲಿರುವ ಎಲ್ಲರ ಕಾಲಿಗೆ ಬಿದ್ದು ಕೇಳುತ್ತೇನೆ. ಈ ವಿಷಯದಲ್ಲಿ ಸಂಧಾನ ಅಥವಾ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಅಮಾಯಕರು ಬಲಿಯಾಗಬಾರದು ಎಂಬುದು ನನ್ನ ಅಪೇಕ್ಷೆ’ ಎಂದರು.

‘ಕಾಲವೇ ನ್ಯಾಯವನ್ನು ಹೇಳುತ್ತದೆ. ಈಗ ಕೋರ್ಟ್‌ಗೆ ಹೋಗಿ ಆಗಿದೆ. ಕೋರ್ಟ್‌ಗೆ ಹೋದ ಮೇಲೆ ಜಾಸ್ತಿ ಮಾತನಾಡಬಾರದು. ನಾನು ತಪ್ಪು ಮಾಡಿದ್ದರೆ ನನಗೆ, ಬೇರೆಯವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ. ಯಾರೇ ಇರಲಿ ಪ್ರತಿಯೊಬ್ಬರೂ ಕಾನೂನಿಗೆ ತಲೆ ಬಾಗಲೇಬೇಕು. ಇದಕ್ಕಿಂತ ಹೆಚ್ಚು ಹೇಳಲಾರೆ’ ಎಂದು ಹೇಳಿದರು.

‘ಹೆಣ್ಣು ಧೈರ್ಯವಾಗಿ ನಿಂತು ಅನ್ಯಾಯ ಹೇಳಿಕೊಳ್ಳಬೇಕು. ಹಾಗೆ ಹೇಳಿಕೊಂಡಿದ್ದರೆ ಕೈ ಎತ್ತಿ ನಮಸ್ಕರಿಸುತ್ತಿದ್ದೆ. ಏನೋ ಉದ್ದೇಶ ಇಟ್ಟುಕೊಂಡು ಹೇಳಿದ್ದು ವಿಷಾದಕರ’ ಎಂದು ಸರ್ಜಾ ಹೇಳಿದರು.

ಕಮಿಷನರ್‌ಗೆ ದೂರು

‘ನಟ ಅರ್ಜುನ್ ಸರ್ಜಾ ಅವರ ಇ–ಮೇಲ್ ಹಾಗೂ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ’ ಎಂದು ಆರೋ‍ಪಿಸಿ ಸರ್ಜಾ ಅವರ ವ್ಯವಸ್ಥಾಪಕ ಶಿವಾರ್ಜುನ್, ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ದೂರು ನೀಡಿದ್ದಾರೆ.

‘ಯಾರೋ ದುಷ್ಕರ್ಮಿಗಳು, ವ್ಯವಸ್ಥಿತ ಸಂಚು ರೂಪಿಸಿಯೇ ಸರ್ಜಾ ಅವರ ಇ–ಮೇಲ್ ಹಾಗೂ ಟ್ವಿಟರ್ ಖಾತೆ ಹ್ಯಾಕ್ ಮಾಡಿದ್ದಾರೆ. ಜೊತೆಗೆ ಅಪರಿಚಿತ ವ್ಯಕ್ತಿಗಳು, ಹಲವು ಸಂದೇಶಗಳನ್ನು ಕಳುಹಿಸಿ ಬೆದರಿಸುತ್ತಿದ್ದಾರೆ. ಅವರ ಉದ್ದೇಶವೇನು ಎಂಬುದು ಗೊತ್ತಾಗಿಲ್ಲ. ಅವರನ್ನು ಪತ್ತೆ ಹಚ್ಚಬೇಕು’ ಎಂದು ದೂರಿನಲ್ಲಿ ಹೇಳಲಾಗಿದೆ.

ದೂರಿನ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಶಿವಾರ್ಜುನ್, ‘ಸರ್ಜಾ ಅವರೇ 40 ಪುಟಗಳ ದಾಖಲೆಗಳನ್ನು ಕೊಟ್ಟಿದ್ದರು. ಅವರ ಸೂಚನೆಯಂತೆ ದೂರನ್ನು ಕಮಿಷನರ್‌ಗೆ ಕೊಟ್ಟಿದ್ದೇನೆ’ ಎಂದು ಹೇಳಿದರು.

ನಮ್ಮ ಕೈ ಮೀರಿದೆ:ಅಂಬರೀಷ್‌

ಪ್ರಕರಣ ನ್ಯಾಯಾಲಯಕ್ಕೆ ಹೋಗಿರುವುದರಿಂದ ಇದೆಲ್ಲಾ ನಮ್ಮ ವ್ಯಾಪ್ತಿ ಮೀರಿದೆ. ಉಭಯತರರಿಗೂ ಸಮಸ್ಯೆ ಆಗಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರಸ್ಪರ ತಪ್ಪು ಹೊರಿಸುತ್ತಿದ್ದಾರೆ ಎಂದು ಹಿರಿಯ ನಟ ಅಂಬರೀಷ್‌ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇಬ್ಬರ ನಡುವೆಯೂ ಸಂಧಾನ ಮಾಡಬೇಕು ಎಂಬುದು ನಮ್ಮ ಆಸೆ. ಶ್ರುತಿ ಅವರಿಗಾದ ತೊಂದರೆ ಹೇಳಿಕೊಂಡಿದ್ದಾರೆ. ನನಗೂ ಮಗಳಿದ್ದಾಳೆ ಎಂದು ಹೇಳಿರುವ ಸರ್ಜಾ ಹೀಗೆಲ್ಲಾ ಆರೋಪ ಬಂದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ಸಮಯ ತೆಗೆದುಕೊಂಡು ಒಳ್ಳೆಯ ನಿರ್ಧಾರಕ್ಕೆ ಬನ್ನಿ ಎಂದು ಹೇಳಿದ್ದೇವೆ’ ಎಂದರು.

ಮಿಟೂ ಬಗ್ಗೆ ಸ್ಪಷ್ಟವಾಗಿ ಅಧ್ಯಯನ ಮಾಡಬೇಕಿದೆ. ಅಮಿತಾಬ್‌ ಬಚ್ಚನ್‌ ಮೇಲೂ ಆರೋಪ ಮಾಡಿದವರಿದ್ದಾರೆ. ಏನು ಮಾಡಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.