ADVERTISEMENT

ತೋಟಗಾರಿಕೆ ಇಲಾಖೆ ಅಧಿಕಾರಿಗೆ ತರಾಟೆ: ನರೇಗ ಕೈಪಿಡಿ ಓದಿ ಹೇಳಿದ ಕೃಷ್ಣಬೈರೇಗೌಡ

ನರೇಗ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 11:44 IST
Last Updated 22 ನವೆಂಬರ್ 2018, 11:44 IST
ಸಭೆಯಲ್ಲಿ ಸಚಿವರ ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದ ಕೈಪಿಡಿಯನ್ನು ಓದಿ ಹೇಳಿದರು.
ಸಭೆಯಲ್ಲಿ ಸಚಿವರ ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದ ಕೈಪಿಡಿಯನ್ನು ಓದಿ ಹೇಳಿದರು.   

ಬಳ್ಳಾರಿ: ಉದ್ಯೋಗಖಾತ್ರಿ ಯೋಜನೆ ಅಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾತ್ರ ನೆರವು ನೀಡಿದ ತೋಟಗಾರಿಕೆ ಇಲಾಖೆಯ ಕಾರ್ಯವೈಖರಿಯ ಕುರಿತು ಇಲ್ಲಿ ಗುರುವಾರ ಆಕ್ಷೇಪಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣಬೈರೇಗೌಡ, ಖಾತ್ರಿ ಯೋಜನೆಯ ಕೈಪಿಡಿಯನ್ನು ತರಿಸಿ ಉಪನಿರ್ದೇಶಕ ಪಿ.ಜಿ.ಚಿದಾನಂದ ಅವರ ಮುಂದೆ ನಿಮಯಗಳನ್ನು ಓದಿ ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇನ್ನೂ ಹಲವು ಅಧಿಕಾರಿಗಳ ಬೆವರಿಳಿಸಿದರು.

‘ಜಿಲ್ಲೆಯಲ್ಲಿ 900 ಎಕರೆ ಜಮೀನಿನಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ಮಾತ್ರ ನೆರವು ನೀಡಲಾಗಿದೆ. ಅವರೆಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರು’ ಎಂಬ ಅಧಿಕಾರಿಯ ಮಾತನ್ನು ಸಚಿವರು ಒಪ್ಪಲಿಲ್ಲ.

ADVERTISEMENT

‘ನರೇಗ ಅಡಿ ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ, ಬುಡಕಟ್ಟು, ಬಿಪಿಎಲ್‌ ಕಾರ್ಡುದಾರರಿಗೆ ಸೌಲಭ್ಯ ನೀಡಬಹುದು. ಅವರಿಗೆ ನೀಡಿದ ಬಳಿಕ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸೌಲಭ್ಯ ಕೊಡಬಹುದು ಎಂಬ ನಿಯಮವಿದೆ. ನಿಮ್ಮಷ್ಟಕ್ಕೆ ನೀವೇ ಅದನ್ನು ಮೀರಿದ್ದೀರಿ. ಆ ಮೂಲಕ ಜಿಲ್ಲೆಯ ಸುಮಾರು 5 ಸಾವಿರ ರೈತರಿಗೆ ನಷ್ಟ ಉಂಟು ಮಾಡಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯ 200 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ತಲಾ ಕನಿಷ್ಠ ಹತ್ತು ಚೆಕ್‌ ಡ್‌್ಯಾಂ ನಿರ್ಮಿಸಿದರೂ 2 ಸಾವಿರವಾಗುತ್ತದೆ. ಆದರೆ ಕೆಲವು ನೂರು ಚೆಕ್‌ಡ್ಯಾಂಗಳನ್ನಷ್ಟೇ ಏಕೆ ನಿರ್ಮಿಸುತ್ತಿದ್ದೀರಿ’ ಎಂಬ ಸಚಿವರ ಪ್ರಶ್ನೆಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಕಸಮರ್ಪಕ ಉತ್ತರ ನೀಡಲಿಲ್ಲ.

‘ನರೇಗ ಅಡಿ ಜಿಲ್ಲೆಯ 600ಕ್ಕೂ ಹೆಚ್ಚು ಶಾಲೆಗಳಲ್ಲಿ ಕಾಂಪೌಂಡ್‌ ನಿರ್ಮಾಣದ ಸಮನ್ವಯಕ್ಕಾಗಿ ತಮ್ಮ ಕಚೇರಿಯ ಕೇಸ್‌ ವರ್ಕರ್‌ ಅನ್ನು ನಿಯೋಜಿಸಲಾಗಿದೆ’ ಎಂದು ಹೇಳಿದ ಡಿಡಿಪಿಐ ಓ.ಶ್ರೀಧರನ್‌ ಕೂಡ ಸಚಿವರ ಕೆಂಗಣ್ಣಿಗೆ ಗುರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.