ADVERTISEMENT

ನರೇಗಾ vs ಜಿ ರಾಮ್‌ಜಿ: ವಿಧಾನ ಪರಿಷತ್ತಿನಲ್ಲಿ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 20:55 IST
Last Updated 2 ಫೆಬ್ರುವರಿ 2026, 20:55 IST
<div class="paragraphs"><p>ವಿಧಾನಸೌಧ </p></div>

ವಿಧಾನಸೌಧ

   

ಬೆಂಗಳೂರು: ‘ವಿಬಿ ಜಿ–ರಾಮ್‌ಜಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರವು ಅಧಿಕಾರ ಕೇಂದ್ರೀಕರಣಕ್ಕೆ ಯತ್ನಿಸುತ್ತಿದೆ’ ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರತಿಪಾದಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ವಿಧಾನ ಪರಿಷತ್ತಿನಲ್ಲಿ ಸೋಮವಾರ ಚರ್ಚೆಯ ವೇಳೆ, ಕಾಂಗ್ರೆಸ್‌ನ ಈ ಪ್ರತಿಪಾದನೆಯನ್ನು ಬಿಜೆಪಿ ಸದಸ್ಯರು ಖಂಡಿಸಿದರು. ‘ನರೇಗಾ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಗುರಿ’ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ ಕಟುವಿರೋಧ
ನರೇಗಾ ಯೋಜನೆ ಅಡಿ ಗ್ರಾಮ ಪಂಚಾಯಿತಿ ಸದಸ್ಯರು, ತಮ್ಮ ವ್ಯಾಪ್ತಿಯಲ್ಲಿ ಯಾವೆಲ್ಲಾ ಕೆಲಸ ಮಾಡಬಹುದು ಎಂದು ನಿರ್ಧರಿಸುತ್ತಿದ್ದರು. ಅಧಿಕಾರ ವಿಕೇಂದ್ರೀಕರಣದ ಪರಿಣಾಮಕಾರಿ ಅನುಷ್ಠಾನಕ್ಕೆ ನರೇಗಾ ಕಾರಣವಾಗಿತ್ತು. ಆದರೆ ಬಿಜೆಪಿಗೆ ಅಧಿಕಾರ ವಿಕೇಂದ್ರೀಕರಣ ಬೇಕಿಲ್ಲ. ವಿಬಿ ಜಿ–ರಾಮ್‌ಜಿ ಮೂಲಕ ಗ್ರಾಮ ಪಂಚಾಯತಿಗಳ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ
– ಡಿ.ಟಿ.ಶ್ರೀನಿವಾಸ್‌, ಕಾಂಗ್ರೆಸ್‌
ನರೇಗಾವು ಗ್ರಾಮ ಸ್ವರಾಜ್ಯದ ಗುರಿ ಸಾಧನೆಯೆಡೆಗಿನ ಕ್ರಮವಾಗಿತ್ತು. ಆ ಯೋಜನೆಯನ್ನು ರದ್ದುಪಡಿಸುವ ಮೂಲಕ, ಗ್ರಾಮ ಪಂಚಾಯಿತಿಗಳ ಅಸ್ತಿತ್ವವನ್ನೇ ಹೊಸಕಿಹಾಕಲು ಕೇಂದ್ರ ಸರ್ಕಾರ ಹೊರಟಿದೆ. ಇದು ಸರಿಯಲ್ಲ. ಜನರು ತಮ್ಮ ಮನೆ–ಹೊಲಗಳಿಗೆ ರಸ್ತೆ ನಿರ್ಮಿಸಿಕೊಳ್ಳುವ, ಬದು ಹಾಕುವಂತಹ ಕೆಲಸಗಳಿಗೆ ನರೇಗಾ ನೀಡಿದ್ದ ಶಕ್ತಿಯನ್ನು ವಿಬಿ ಜಿ–ರಾಮ್‌ಜಿ ಕಿತ್ತುಕೊಂಡಿದೆ
– ತಿಪ್ಪಣ್ಣಪ್ಪ ಕಮಕನೂರ, ನಾಮನಿರ್ದೇಶಿತ ಸದಸ್ಯ
ಕೋವಿಡ್‌ ಅವಧಿಯಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗ, ಭದ್ರತೆ ಒದಗಿಸಿದ್ದು ನರೇಗಾ. ಗ್ರಾಮ ಪಂಚಾಯತಿಯ ಸದಸ್ಯರು ನಿರ್ಧರಿಸುತ್ತಿದ್ದ ಕೆಲಸವನ್ನು, ದೆಹಲಿಯಲ್ಲಿ ಕೂತ ನಾಲ್ಕಾರು ಗುಜರಾತಿ ಅಧಿಕಾರಿಗಳು ಇನ್ನು ಮುಂದೆ ನಿರ್ಣಯಿಸಲಿದ್ದಾರೆ. ಜಿ–ರಾಮ್‌ಜಿ ಎಂಬುದನ್ನು, ಗುಜರಾತ್‌ ರಾಮ್‌ಜಿ ಎಂದು ಕರೆದರೆ ಸೂಕ್ತವಾದೀತು. ಕೇಂದ್ರವು ತನ್ನ ಪಾಲನ್ನು ಶೇ 90ರಿಂದ ಶೇ 60ಕ್ಕೆ ಇಳಿಸಿದೆ. ಶೇ 40ರಷ್ಟು ವೆಚ್ಚವನ್ನು ರಾಜ್ಯವೇ ಭರಿಸುವುದಾದರೆ, ನಾವೇ ಹೊಸ ಯೋಜನೆ ಆರಂಭಿಸಬಹುದಲ್ಲವೇ
– ಎಂ.ಆರ್‌.ಸೀತಾರಾಂ, ಕಾಂಗ್ರೆಸ್‌ 
ಬಿಜೆಪಿ ಸಮರ್ಥನೆ
ನರೇಗಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದೇ ವಿಬಿ ಜಿ–ರಾಮ್‌ಜಿಯನ್ನು ಜಾರಿಗೆ ತರಲಾಗಿದೆ. ಈ ಬಗ್ಗೆ ಚರ್ಚೆ ನಡೆಸುವ ಅಗತ್ಯವೇ ಇರಲಿಲ್ಲ. ಆದರೆ ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರವನ್ನು ತೆಗಳಬೇಕು ಎಂಬ ಒಂದೇ ಉದ್ದೇಶದಿಂದ ವಿಶೇಷ ಅಧಿವೇಶನ ಕರೆದಿದೆ. ವಿಬಿ ಜಿ–ರಾಮ್‌–ಜಿಗೆ ಕಾಂಗ್ರೆಸ್‌ನ ವಿರೋಧವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ
– ಕೆ.ಎಸ್‌.ನವೀನ್‌, ಬಿಜೆಪಿ
ವಿಬಿ ಜಿ–ರಾಮ್‌ಜಿಯನ್ನು ವಿರೋಧಿಸಿ ಗಾಂಧೀಜಿ ಮತ್ತು ಸಂಘಪ್ಪ ಅವರ ಜಾಹೀರಾತನ್ನು ಸರ್ಕಾರ ನೀಡಿದೆ. ಗಾಂಧೀಜಿ ಅವರು, ‘ರಾಮರಾಜ್ಯದ ಕನಸನ್ನು ನನಸು ಮಾಡಲು ಜಿ–ರಾಮ್‌–ಜಿ ಬರುತ್ತಿದ್ದಾನೆ. ನನ್ನ ರಾಮನನ್ನು ಕಂಡರೆ ನಿಮಗೇಕೆ ಅಲರ್ಜಿ’ ಎಂದು ಪ್ರಶ್ನಿಸುವ ಸಾಲನ್ನು ಆ ಜಾಹೀರಾತಿಗೆ ಸೇರಿಸಬೇಕಿತ್ತು. ಸಂಘಪ್ಪ ಸಂಘ ಜೀವಿ ಎಂಬುದನ್ನೂ ಸೇರಿಸಬೇಕಿತ್ತು
– ಭಾರತಿ ಶೆಟ್ಟಿ, ಬಿಜೆಪಿ
ವಿಕಸಿತ ಭಾರತವನ್ನು ಸಾಧಿಸಲು ಜಿ–ರಾಮ್‌ಜಿ ನೆರವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ಈ ಯೋಜನೆ ಶಕ್ತಿ ನೀಡಲಿದೆ. ಕೇಂದ್ರ ಸರ್ಕಾರದ ಅನುದಾನ, ಆದಾಯದ ಹಂಚಿಕೆ ಬಗ್ಗೆ ಸಮಸ್ಯೆ ಇದ್ದರೆ ಮುಖ್ಯಮಂತ್ರಿ ಅವರು ಜಿಎಸ್‌ಟಿ ಸಭೆಗೆ ಹೋಗಲಿ. ಸಮಸ್ಯೆ ಬಗೆಹರಿಯದೇ ಇದ್ದರೆ ನ್ಯಾಯಾಲಯದ ಮೊರೆ ಹೋಗಲಿ. ಬದಲಿಗೆ ಸುಮ್ಮನೆ ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಹೇಳಿದರೆ ಪ್ರಯೋಜನವಾಗುವುದಿಲ್ಲ
– ಡಿ.ಎಸ್‌.ಅರುಣ್‌, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT