ADVERTISEMENT

ಇಳಿದೀತೆ ಶಾಲಾ ಮಕ್ಕಳ ‘ಹೊರೆ’

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 19:41 IST
Last Updated 25 ನವೆಂಬರ್ 2018, 19:41 IST
   

ಬೆಂಗಳೂರು: ಶಾಲಾ ಮಕ್ಕಳ ಹೆಗಲ ಮೇಲಿನ ಬ್ಯಾಗಿನ ಹೊರೆಯನ್ನು ಇಳಿಸಲು ಮಾನವ ಸಂಪೂನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಮತ್ತೊಂದು ಹೆಜ್ಜೆ ಮುಂದೆ ಬಂದಿದೆ.

ಕಲಿಕೆಯಲ್ಲಿ ಅನಗತ್ಯವಾಗಿ ಹೆಚ್ಚುವರಿ ವಿಷಯಗಳನ್ನು ಸೇರಿಸದಂತೆ, ಶಾಲಾ ಬ್ಯಾಗಿನ ತೂಕದ ಪ್ರಮಾಣ ನಿರ್ದಿಷ್ಟ ಕೆ.ಜಿ.ಗಳನ್ನು ಮೀರದಂತೆ ಕಡಿವಾಣ ಹಾಕುವ ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಆದೇಶದಲ್ಲಿನ ಅಂಶಗಳು ಒಳಗೊಂಡ ಮಾರ್ಗಸೂಚಿ ರಚಿಸಿಕೊಂಡು ಎಲ್ಲ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚಿಸಿದೆ.

**

ADVERTISEMENT

ಶಾಲಾ ಬ್ಯಾಗ್‌ನ ಭಾರ: ಸಮೀಕ್ಷೆ

ಎಂಎಚ್‌ಆರ್‌ಡಿ ಸೂಚನೆಯ ಮೇರೆಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ(ಡಿಎಸ್‌ಇಆರ್‌ಟಿ), ಮಗು ಮತ್ತು ಕಾನೂನು ಕೇಂದ್ರ ಹಾಗೂ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ(ಎನ್‌ಎಲ್‌ಎಸ್‌ಐಯು) ಜಂಟಿ ಸಮಿತಿಯು, ‘ಭಾರದ ಶಾಲಾ ಬ್ಯಾಗ್‌: ಕಲಿಕೆಯ ಹೊರೆ– ಕರ್ನಾಟಕದಲ್ಲಿ ಒಂದು ಮಾದರಿ ಸಮೀಕ್ಷೆ’ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ 2016ರ ಜೂನ್‌ನಲ್ಲಿ ವರದಿ ನೀಡಿತ್ತು. ಆ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ.

**

ಸುತ್ತೋಲೆಯಲ್ಲಿ ಏನಿದೆ?

* ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂ ವರ್ಕ್‌ ನೀಡಬಾರದು.

* ಭಾಷೆ ಮತ್ತು ಗಣಿತವನ್ನು ಹೊರತು ಪಡಿಸಿ ಬೇರೆ ಯಾವುದೇ ಪಠ್ಯವಿಷಯಗಳನ್ನು 1 ಮತ್ತು 2ನೇ ತರಗತಿಗಳಿಗೆ ನಿಗದಿಪಡಿಸಬಾರದು. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಮಾರ್ಗಸೂಚಿ ಅನ್ವಯ 3 ರಿಂದ 5ನೇ ತರಗತಿ ಮಕ್ಕಳಿಗೆ ಭಾಷಾ, ಪರಿಸರ ಅಧ್ಯಯನ ಮತ್ತು ಗಣಿತ ಪಠ್ಯ ನಿಗದಿಪಡಿಸಬಹುದು.

* ನಿಗದಿಪಡಿಸಿದ ಬ್ಯಾಗಿನ (ಪಠ್ಯದ ಎಲ್ಲ ಸಾಮಗ್ರಿ ಸೇರಿ) ಭಾರಕ್ಕಿಂತ ಇತರೇ ಪುಸ್ತಕಗಳು, ಕಲಿಕಾ ಪರಿಕರಗಳು ತರುವಂತೆ ಹೇಳಲೇಬಾರದು.

**

ವಿದ್ಯಾರ್ಥಿಗಳ ತರಗತಿ ಮತ್ತು ವಯಸ್ಸಿಗೆ ಅನುಗುಣವಾಗಿ ಭೌತಿಕ ಭಾರ ಇಳಿಸಿದಂತೆ, ಅವರ ಪಠ್ಯಕಲಿಕೆಯ ಸಾಮರ್ಥ್ಯವನ್ನು ಆಧರಿಸಿ ಶೈಕ್ಷಣಿಕ ಹೊರೆಯನ್ನು ಇಳಿಸಬೇಕು.

–ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

**

ಎಂಎಚ್‌ಆರ್‌ಡಿಯ ಆದೇಶ ಅವೈಜ್ಞಾನಿಕವಾಗಿದೆ. ಏಕಪಕ್ಷೀಯವಾಗಿದೆ. ಹಾಗಾಗಿ ಅದು ಅನುಷ್ಠಾನಗೊಳಿಸಲು ಯೋಗ್ಯವಲ್ಲ.

–ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ

**

ಬ್ಯಾಗ್‌ ಹೊರೆ ಇಳಿಸಲು ವರದಿ ಸಿದ್ಧಪಡಿಸಿದ್ದೇವೆ. ಶಾಲಾ ಆಡಳಿತ ಮಂಡಳಿಗಳ ಜತೆಗೂ ಚರ್ಚಿಸಿದ್ದೇವೆ. ಅದನ್ನು ಈಗಿನ ಸುತ್ತೋಲೆ ಅನುಸಾರ ಪರಿಷ್ಕರಿಸಿ ಅನುಷ್ಠಾನಕ್ಕೆ ತರುತ್ತೇವೆ.

–ಡಾ.ಪಿ.ಸಿ.ಜಾಫರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.