ಬೆಂಗಳೂರು: ಸೂಕ್ಷ್ಮ ನೀರಾವರಿ ಪರಿಕರಗಳನ್ನು ಪಡೆಯಲು ಇದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಿದ್ದು, ಎಲ್ಲ ವರ್ಗದ ರೈತ ಫಲಾನುಭವಿಗಳು 7 ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಕೃಷಿ ಇಲಾಖೆ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತ ಫಲಾನುಭವಿಗಳನ್ನು ಹೊರತುಪಡಿಸಿ ಇತರೆ ವರ್ಗದವರಿಗೆ ಒಮ್ಮೆ ಮಾತ್ರ ಒಂದು ನಿರ್ದಿಷ್ಟ ಜಮೀನಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತ ಫಲಾನುಭವಿಗಳು 7 ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯುವ ಅವಕಾಶ ಇತ್ತು. ಇನ್ನು ಮುಂದೆ ಇತರ ಸಮುದಾಯಗಳ ರೈತರಿಗೂ ಈ ಸೌಲಭ್ಯ ಸಿಗಲಿದೆ ಎಂದು ಕೃಷಿ ಇಲಾಖೆ ಪ‍್ರಕಟಣೆ ತಿಳಿಸಿದೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಎಲ್ಲ ಜಿಲ್ಲೆಗಳ ರೈತರು, ಇತರೆ ವರ್ಗಗಳಿಗೆ ಇರುವ ನಿರ್ಬಂಧ ಸಡಿಲಿಸುವಂತೆ ಮನವಿ ಮಾಡಿದ್ದರು. ಗಂಭೀರವಾಗಿ ಪರಿಗಣಿಸಿದ ಸಚಿವರು ನಿಯಮ ಸಡಿಲಿಕೆ ಮಾಡಿಸಿದ್ದಾರೆ ಎಂದೂ ಪ್ರಕಟಣೆ ಹೇಳಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಇದ್ದ ಒಂಬತ್ತು ಘಟಕಗಳನ್ನು ಸೇರ್ಪಡೆಗೊಳಿಸಿ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂಆರ್‌ಕೆವಿವೈ) ಎಂದು ಮರು ನಾಮಕರಣಗೊಳಿಸಿ ಅನುಷ್ಠಾನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ವ್ಯಾಪ್ತಿಗೆ ಒಳಪಡುವಂತೆ ರೈತರಿಗೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ ಎಂದೂ ಪ್ರಕಟಣೆ ವಿವರಿಸಿದೆ.
2024–25 ನೇ ಸಾಲಿನಲ್ಲಿ ಪಿಎಂಕೆಎಸ್‌ವೈ ಮತ್ತು ಪಿಎಂಎಂಎಸ್ ಯೋಜನೆಯಡಿ ಸೂಕ್ಷ್ಮ ನೀರಾವರಿ ಯೋಜನೆಗೆ ₹247 ಕೋಟಿ ಮೀಸಲಿರಿಸಲಾಗಿತ್ತು. 2.60 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಿದೆ. ಅದೇ ರೀತಿ ಟಾಪ್‌ಅಪ್ ಯೋಜನೆಯಡಿ ₹252 ಕೋಟಿಗಳ ಅನುದಾನವನ್ನು ಸೂಕ್ಷ್ಮ ನೀರಾವರಿ ಸಾಧನ–ಸಲಕರಣೆಗಳ ನೆರವಿಗೆ ಬಳಸಲಾಗುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.