ADVERTISEMENT

ಸರ್ಕಾರಿ ವೆಚ್ಚದಲ್ಲೇ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಗುತ್ತದೆ: ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:50 IST
Last Updated 23 ಮೇ 2020, 13:50 IST
ಚಿಕ್ಕಬಳ್ಳಾಪುರ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅರಮನೆ ಮೈದಾನದಲ್ಲಿದ್ದ ಜನದಟ್ಟಣೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿ, ಸಮಾಧಾನ ಹೇಳಿದ ವೈದ್ಯಕೀಯ ಶಿಕ್ಷಣ ಸಚಿವರು
ಚಿಕ್ಕಬಳ್ಳಾಪುರ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅರಮನೆ ಮೈದಾನದಲ್ಲಿದ್ದ ಜನದಟ್ಟಣೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿ, ಸಮಾಧಾನ ಹೇಳಿದ ವೈದ್ಯಕೀಯ ಶಿಕ್ಷಣ ಸಚಿವರು   
""

ಬೆಂಗಳೂರು: ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಒಡಿಶಾ ಮತ್ತು ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ಗೊಂದಲ ಉಂಟಾಗಿದ್ದನ್ನು ಗಮನಿಸಿ ವೈದ್ಯಕೀಯ ಶಿಕ್ಷಣ ಸಚಿವರೇ ಖುದ್ದು ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ ಘಟನೆ ಶನಿವಾರ ಅರಮನೆ ಮೈದಾನದ ಬಳಿ ನಡೆಯಿತು.

ಇಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿ, ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಸರ್ಕಾರದ ವೆಚ್ಚದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅದಕ್ಕೆ ಬೇಕಾದ ಎಲ್ಲಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೀವು ನಿಮ್ಮ ಊರಿಗೆ ಹೋಗಲು ಹೆಚ್ಚುವರಿ ಬೋಗಿಗಳನ್ನು ಒದಗಿಸಲು ರೈಲ್ವೆ ಸಚಿವರಿಗೂ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ತಪ್ಪು ಮಾಹಿತಿಯಿಂದಾಗಿ ಮಣಿಪುರ, ಒಡಿಶಾ ರಾಜ್ಯಗಳ ಸಾವಿರಾರು ಮಂದಿ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಈ ಗೊಂದಲ ಉಂಟಾಗಿತ್ತು. ಸುಮಾರು ಒಂದೂವರೆ ಸಾವಿರ ಮಂದಿಗೆ ಆಯಾ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿಕೊಂಡು ಸೇವಾಸಿಂಧು ಆ್ಯಪ್ ಮೂಲಕ ಮೊಬೈಲ್ ಗಳಿಗೆ ಸಂದೇಶ ರವಾನಿಸಲಾಗಿತ್ತು. ಆ ಸಂದೇಶ ಅವರಲ್ಲೇ ಫಾರ್ವರ್ಡ್‌ ಆಗಿ ಇಂದು ಪ್ರಯಾಣಕ್ಕೆ ಆಯ್ಕೆ ಆಗದಿದ್ದವರೂ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಭಾರಿ ದಟ್ಟಣೆ ಉಂಟಾಗಿತ್ತು.

ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಹೊರಟ್ಟಿದ್ದ ಸಚಿವರು ಪ್ಯಾಲೇಸ್ ಗ್ರೌಂಡಿನಲ್ಲಿದ್ದ ಭಾರಿ ದಟ್ಟಣೆ ಗಮನಿಸಿ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಂದ ಗೊಂದಲಕ್ಕೆ ಕಾರಣಗಳನ್ನು ಪಡೆದರು. ತಕ್ಷಣವೇ ಮೊಬೈಲ್ ಮೂಲಕ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಗೊಂದಲ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಆದೇಶ ನೀಡಿದರು. ಈ ಸಂದರ್ಭದಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿದ್ದ ಎರ್ಷಾದ್ ಎಂಬಾತ ಕುಸಿದು ಬಿದ್ದಾಗ ಆತನ ಬಳಿ ಧಾವಿಸಿ, ಸ್ವತಃ ವೈದ್ಯರು ಆಗಿರುವ ಸಚಿವ ಸಧಾಕರ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಸಂಕಷ್ಟದ ಈ ಸಮಯದಲ್ಲಿ ಸಾರ್ವಜನಿಕರ ಹಿತ ಕಾಪಾಡುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ವದಂತಿಗಳನ್ನು ನಂಬಿ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಸರ್ಕಾರದೊಂದಿಗೆ ಸಹಕರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಲಸಿಗರನ್ನು ಆಯಾ ರಾಜ್ಯಗಳಿಗೆ ಸರ್ಕಾರಿ ವೆಚ್ಚದಲ್ಲೇ ಕಳುಹಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.