ADVERTISEMENT

ಹಾಲು ದರ: ಹೊರೆಯಾಗದಂತೆ ತೀರ್ಮಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:30 IST
Last Updated 21 ನವೆಂಬರ್ 2022, 19:30 IST
   

ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳದ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕರೆದಿದ್ದ ಕೆಎಂಎಫ್‌ ಮತ್ತುಅಧಿಕಾರಿಗಳ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ರೈತರಿಗೆ ಸಮಸ್ಯೆ ಆಗಬಾರದು ಮತ್ತು ಗ್ರಾಹಕರಿಗೆ ಹೊರೆಯೂ ಆಗಬಾರದು, ಸಂಸ್ಥೆಯು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಂದು ನಿರ್ಣಯ ತೆಗೆದುಕೊಳ್ಳುವಂತೆ ಕೆಎಂಎಫ್‌ಗೆ ಸೂತ್ರವನ್ನು ನೀಡಿದ್ದೇನೆ’ ಎಂದರು.

‘ಇದಕ್ಕೆ ಕೆಎಂಎಫ್‌ ಎರಡು ದಿನಗಳ ಸಮಯ ಕೇಳಿದೆ. ನಾನು ನೀಡಿದ ಸೂತ್ರಕ್ಕೆ ಅನುಗುಣವಾಗಿ ನಿರ್ಣಯ ತೆಗೆದುಕೊಂಡು ಬರಲಿ, ಆ ಬಳಿಕ ಪರಿಶೀಲನೆ ನಡೆಸುತ್ತೇನೆ’ ಎಂದರು.

ADVERTISEMENT

‘ಹಾಲಿನ ದರ, ಉತ್ಪಾದನಾ ವೆಚ್ಚದ ಬಗ್ಗೆಯೂ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ. ಆದಾಯದಲ್ಲೂ ಸೋರಿಕೆ ಆಗುತ್ತಿದ್ದು, ಅದನ್ನು ತಡೆಯಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ವಿವರವನ್ನೂ ಪಡೆದಿದ್ದೇನೆ. ಲೀಟರ್‌ಗೆ ₹3 ಹೆಚ್ಚಿಸಬೇಕು ಎಂದು ಈ ಹಿಂದೆ ಕೈಗೊಂಡಿದ್ದ ತೀರ್ಮಾನ ಕಾರ್ಯಗತಗೊಳಿಸುವುದು ಬೇಡ ಎಂದಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

‘ಕೆಎಂಎಫ್ ಕೂಡ ಸರ್ಕಾರದ ಒಂದು ಅಂಗವಾಗಿದ್ದು, ರೈತರಿಗೆ ಪ್ರೋತ್ಸಾಹ ಧನ, ಶಾಲಾ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಗ್ರಾಹಕರ ಹಾಗೂ ರೈತರ ಹಿತಚಿಂತನೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದ್ದು, ಕೆಎಂಎಫ್‌ಗೆ ಮಾರ್ಗದರ್ಶನ ನೀಡಲಾಗಿದೆ. ಹಾಲಿನ ದರ ಕಾಲಕಾಲಕ್ಕೆ ಬದಲಾವಣೆಯಾಗುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸ್ಪರ್ಧೆಯಲ್ಲಿವೆ. ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದೇನೆ’ ಎಂದರು.

ಸಭೆಯಲ್ಲಿ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಮತ್ತು ಇತರ ಹಿರಿಯ ಅಧಿಕಾರಿಗಳೂ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.