
ಬೆಂಗಳೂರು: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ ತೇರ್ಗಡೆಗೆ ನಿಗದಿ ಮಾಡಿರುವ ಶೇ 33 ಅಂಕ ಈ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗಲಿದೆ. ಈ ನಿರ್ಧಾರ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಕರಣೆ ಅಲ್ಲ, ಇತರೆ ರಾಜ್ಯಗಳಂತೆ ಏಕರೀತಿಯ ಪರೀಕ್ಷಾ ಪದ್ಧತಿ ಅಳವಡಿಕೆಯ ಕ್ರಮ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಉತ್ತೀರ್ಣತೆಯ ಕನಿಷ್ಠ ಅಂಕವನ್ನು ಶೇ 33ಕ್ಕೆ ನಿಗದಿ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ನಂತರವೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿತ್ತು. ಲಕ್ಷಾಂತರ ಮಕ್ಕಳಿಗೆ ಕೆಲವೊಮ್ಮೆ ಎರಡು ಅಂಕಗಳೇ ನಿರ್ಣಾಯಕವಾಗಿರುತ್ತವೆ. ಒಬ್ಬ ವ್ಯಕ್ತಿ ಇಂದು ಚಾಲನಾ ಪರವಾನಗಿ ಪಡೆಯಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನೀಡಬೇಕಾಗುತ್ತದೆ. ಕೆಲ ಹುದ್ದೆಗಳಲ್ಲಿ ಕರ್ನಾಟಕದ ಹೊರಗಿನವರು ಅಧಿಕ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ಹುದ್ದೆಗಳಿಗೆ ಗಳಿಸಿದ ಅಂಕಗಳಿಗಿಂತ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರವಷ್ಟೇ ಅಗತ್ಯವಿದೆ. ಆಳ ಚಿಂತನೆಗಳನ್ನು ನಡೆಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಉತ್ತೀರ್ಣ ಅಂಕ ಶೇ 30ರಿಂದ ಶೇ 33 ಇದೆ. ಆಡಳಿತ ಸುಧಾರಣಾ ಆಯೋಗವೂ ಶಿಫಾರಸು ಮಾಡಿದೆ ಎಂದು ‘ಪ್ರಜಾವಾಣಿ’ ಜತೆ ವಿವರ ಹಂಚಿಕೊಂಡರು.
ಮೂರು ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಭವಿಷ್ಯ ಹಸನಾಗುತ್ತಿದೆ. ಎಸ್‌ಎಸ್‌ಎಲ್‌ಸಿ ನಂತರ ಶಿಕ್ಷಣ ತೊರೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಶಿಕ್ಷಕರನ್ನು ನೇಮಿಸಲು, ಮೂಲ ಸೌಕರ್ಯ ಒದಗಿಸಲು ಸರ್ಕಾರ ಶ್ರಮಿಸುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳತ್ತ ಪೋಷಕರು ಒಲವು ತೋರುತ್ತಿದ್ದಾರೆ. ಆಂಗ್ಲ ಮಾಧ್ಯಮ ಶಾಲೆ, ಪೂರ್ವ ಪ್ರಾಥಮಿಕ ಶಾಲೆಗಳ ಆರಂಭದಿಂದ ಸರ್ಕಾರಿ ಶಾಲೆಗಳತ್ತ ಮಕ್ಕಳು ಆಕರ್ಷಿತರಾಗುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.