ADVERTISEMENT

ಡಿಕೆಶಿ ಜತೆ ಸಚಿವ ಆನಂದ್‌ ಸಿಂಗ್‌ ರಹಸ್ಯ ಸಭೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 14:46 IST
Last Updated 31 ಜನವರಿ 2022, 14:46 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನೆಗೆ ಸೋಮವಾರ ಬೆಳಿಗ್ಗೆ ದಿಢೀರ್‌ ಭೇಟಿನೀಡಿದ್ದು, ಕೆಲಕಾಲ ರಹಸ್ಯ ಸಭೆ ನಡೆಸಿದ್ದಾರೆ. ಉಭಯ ನಾಯಕರ ಚರ್ಚೆಯು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಖಾಸಗಿ ಕಾರಿನಲ್ಲಿ ಬಂದ ಆನಂದ್‌ ಸಿಂಗ್‌, ಶಿವಕುಮಾರ್‌ ಅವರನ್ನು ಭೇಟಿಮಾಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರೇ ಕೊಠಡಿಯಲ್ಲಿ ಕುಳಿತು ಚರ್ಚೆ ನಡೆಸಿದರು. ಬಳಿಕ ಸಚಿವರು ಅಲ್ಲಿಂದ ಹಿಂದಿರುಗಿದರು.

ಬಿಜೆಪಿಯಲ್ಲಿದ್ದ ಆನಂದ್‌ ಸಿಂಗ್‌ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಸೇರಿದ್ದರು. ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಅವರು ಮತ್ತೆ ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದವರಲ್ಲಿ ಬಹುತೇಕರು ಮತ್ತೆ ಮರಳಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಈ ಮಧ್ಯದಲ್ಲೇ ಆನಂದ್‌ ಸಿಂಗ್‌ ಮತ್ತು ಶಿವಕುಮಾರ್‌ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿದೆ.

ADVERTISEMENT

‘ಪ್ರವಾಸೋದ್ಯಮ ಕುರಿತು ಚರ್ಚೆ’: ಶಿವಕುಮಾರ್‌ ಪ್ರತಿನಿಧಿಸುತ್ತಿರುವ ಕನಕಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೇಕೆದಾಟು ಸಂಗಮದ ಬಳಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಭೇಟಿಮಾಡಿ, ಚರ್ಚಿಸಿರುವುದಾಗಿ ಇಬ್ಬರೂ ನಾಯಕರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ನಾನು ಬಳ್ಳಾರಿ ಉಸ್ತುವಾರಿ ಸಚಿವನಾಗಿದ್ದ ಅವಧಿಯಲ್ಲಿ ತುಂಗಾ ಆರತಿ ಕಾರ್ಯಕ್ರಮ ಆರಂಭಿಸಲಾಗಿತ್ತು. ಅದೇ ರೀತಿ ಮೇಕೆದಾಟು ಬಳಿ ಕಾವೇರಿ ಆರತಿ ಕಾರ್ಯಕ್ರಮ ಆರಂಭಿಸುವಂತೆ ಮನವಿ ಮಾಡಿದ್ದೆ. ಆ ಬಗ್ಗೆ ಚರ್ಚಿಸಲು ಆನಂದ್‌ ಸಿಂಗ್‌ ನನ್ನ ಮನೆಗೇ ಬಂದು ಚರ್ಚಿಸಿದ್ದಾರೆ. ನೀವು ಹಿರಿಯ ನಾಯಕರಿದ್ದೀರಿ, ನಿಮ್ಮ ಮನೆಗೆ ನಾನೇ ಬರುತ್ತೇನೆ ಎಂದು ಅವರು ಬಂದರು. ಇದರಲ್ಲಿ ರಾಜಕೀಯ ಏನೂ ಇಲ್ಲ’ ಎಂದರು.

‘ಅವರು ಸಚಿವರಾಗಿದ್ದಾರೆ. ರಾಜಕಾರಣ ಮಾಡುವುದಾದರೆ ನಮ್ಮ ಮನೆಗೆ ಬರಬೇಕಿಲ್ಲ. ನಾನು ಮನೆಯಲ್ಲಿ ರಾಜಕಾರಣ ಮಾತನಾಡುವುದೂ ಇಲ್ಲ. ಅಂತಹ ಅಗತ್ಯವಿದ್ದರೆ ಹೋಟೆಲ್‌, ರೆಸಾರ್ಟ್‌ಗೆ ಹೋಗುತ್ತೇವೆ. ಆನಂದ್‌ ಸಿಂಗ್‌ ಅವರ ಭೇಟಿಯ ಸುದ್ದಿಗೆ ರೆಕ್ಕೆ, ಪುಕ್ಕ ನೀಡುವುದು ಬೇಡ’ ಎಂದು ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.