ADVERTISEMENT

ಇಂಗ್ಲಿಷ್‌ ವಿರುದ್ಧ ಸಚಿವ ಆರಗ ಜ್ಞಾನೇಂದ್ರ ಕಿಡಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 6:36 IST
Last Updated 2 ನವೆಂಬರ್ 2022, 6:36 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ತುಮಕೂರು: ಇಂಗ್ಲಿಷ್ ಭಾಷೆ ಕಲಿಕೆ, ಬಳಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ನಮ್ಮ ಸ್ವಾಭಿಮಾನ ಬಿಟ್ಟು ಇಂಗ್ಲಿಷ್ ಕಲಿಯುತ್ತಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು.

ಜಿಲ್ಲಾ ಆಡಳಿತ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿದ ನಂತರ ಮಾತನಾಡಿದರು.

ಬ್ರಿಟಿಷರು ಬಿಟ್ಟು ಹೋಗಿರುವ ಇಂಗ್ಲಿಷ್ ಭಾಷೆಗೆ ದಾಸರಾಗಿದ್ದೇವೆ. ಸ್ವಾಭಿಮಾನ ಬಿಟ್ಟು ಕಲಿಯುತ್ತಿದ್ದೇವೆ. ವ್ಯಾಪಾರದ ಸಲುವಾಗಿ ದೇಶಕ್ಕೆ ಬಂದು ನಮ್ಮನ್ನು ಆಳಿದ್ದಾರೆ, ನಮ್ಮ ಸಂಸ್ಕೃತಿ ನಾಶ ಮಾಡಿದ್ದಾರೆ. ದೇಶವನ್ನೇ ಕೊಳ್ಳೆ ಹೊಡೆದಿದ್ದಾರೆ. ಕೊನೆಗೆ ಭಾಷೆ ಹೇರಿ ಹೋಗಿದ್ದಾರೆ. ಇಂಗ್ಲಿಷ್ ಕಲಿಯುವುದೇಅದ್ಭುತ ಎಂದು ಭಾವಿಸಿದ್ದೇವೆ ಎನ್ನುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕಿದರು.

ADVERTISEMENT

ಅಡುಗೆ ಮನೆಯಿಂದ ಹಿಡಿದು ಎಲ್ಲೆಡೆ ಇಂಗ್ಲಿಷ್ ಬಳಸುತ್ತಿದ್ದೇವೆ. ಬಿಗುಮಾನ ಬಿಟ್ಟು ಎಲ್ಲಾ ಸಮಯದಲ್ಲೂ ಕನ್ನಡ ಬಳಸಿ, ಬೆಳೆಸಬೇಕು. ಕನ್ನಡಿಗರಿಗೆ ತಾಕತ್ತು, ಸ್ವಾಭಿಮಾನ ಇದ್ದರೆ ಕನ್ನಡ ಭಾಷೆ ಬಳಕೆ ಮಾಡಬೇಕು. ಕನ್ನಡ ಅನ್ನದ ಭಾಷೆಯಾದರೆ ಮಾತ್ರ ಬೆಳೆಯುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣವೂ ಕನ್ನಡದಲ್ಲಿ ಸಿಗುವಂತಾಗಬೇಕು. ಉನ್ನತ ಶಿಕ್ಷಣ ಕನ್ನಡದಲ್ಲಿ ಸಿಗಬೇಕಾದರೆ ಭಾಷಾ ತಜ್ಞರ ಜವಾಬ್ದಾರಿ ಹೆಚ್ಚಿದೆ. ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಲ್ಲಿರುವ ವಿಚಾರಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಕೊಟ್ಟರೆ ಉನ್ನತ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ಕಲಿಸಲು ನೆರವಾಗುತ್ತದೆ ಎಂದು ಹೇಳಿದರು.

‘ನಾನು ಸಚಿವನಾದ ನಂತರ ಗೃಹ ಇಲಾಖೆ ಆದೇಶಗಳನ್ನು ಕನ್ನಡದಲ್ಲೇ ನೀಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಪೊಲೀಸ್ ಕವಾಯಿತು ಹಾಗೂ ಇತರ ಸಂದರ್ಭಗಳಲ್ಲಿ ಕನ್ನಡದಲ್ಲೇ ನಿರ್ದೇಶನ (ಕಮಾಂಡ್) ನೀಡುವಂತೆ ಆದೇಶಿಸಲಾಗಿದೆ. ನಗರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಕನ್ನಡ ಬಳಕೆ ಮಾಡಿ, ನಿರ್ದೇಶನ ನೀಡಿದ್ದನ್ನು ಕಂಡು ಸಂತೋಷವಾಯಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.