ಬೆಂಗಳೂರು: ‘ಎಚ್ಎಂಟಿ ವಶದಲ್ಲಿರುವ 180 ಎಕರೆ ಅರಣ್ಯ ಭೂಮಿಯ ಡಿನೋಟಿಫಿಕೇಶನ್‌ಗೆ ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಉತ್ತರ ಪರಿಶೀಲಿಸಿ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ತರುವ ಮುಖಾಮುಖಿರಹಿತ (ಫೇಸ್‌ಲೆಸ್) ಆನ್‌ಲೈನ್ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಮಧ್ಯಂತರ ಅರ್ಜಿ ಹಿಂಪಡೆಯಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ. ಭಾರಿ ಮೌಲ್ಯದ ಈ ಭೂಮಿಯನ್ನು ನಷ್ಟದಿಂದ ಮುಚ್ಚಿ ಹೋಗಿರುವ ಎಚ್‌ಎಂಟಿ ಸಂಸ್ಥೆ ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡಿ ರಿಯಲ್ ಎಸ್ಟೇಟ್ ಮಾಡಲು ಬಿಡುವುದಿಲ್ಲ’ ಎಂದರು.
‘ಪರಿಸರ ಮಾಲಿನ್ಯ ಮಂಡಳಿಯ ಸೇವೆಗಳನ್ನು ಉದ್ಯಮ ಮತ್ತು ಪರಿಸರಸ್ನೇಹಿ ಮಾಡುವುದು ಫೇಸ್‌ಲೆಸ್ ಸೇವೆಯ ಉದ್ದೇಶ. ಉದ್ದಿಮೆಗಳಿಗೆ, ಸಂಸ್ಥೆಗಳಿಗೆ ಮಂಡಳಿ ನೀಡುತ್ತಿರುವ ವಿವಿಧ ಸೇವೆಗಳನ್ನು ಶೀಘ್ರವಾಗಿ ಮತ್ತು ಸುಲಲಿತವಾಗಿ ಒಂದೇ ಸೂರಿನಡಿ ನೀಡಲು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ (ಐಐಐಟಿಬಿ) ನಿರ್ದೇಶಕ ದೇಬಬ್ರತ ದಾಸ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಂತ್ರಜ್ಞರ ಸಮಿತಿಯು ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ, ಡಿಪಿಎಆರ್ (ಇ-ಆಡಳಿತ) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಚರ್ಚಿಸಿ ಈ ತಂತ್ರಾಂಶವನ್ನು ಸಿದ್ಧಪಡಿಸಿದೆ’ ಎಂದರು.
ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ದೇಬಬ್ರತ ದಾಸ್ ಇದ್ದರು.
‘ಫೆಬ್ರುವರಿಯಲ್ಲಿ ಅರ್ಜುನನ ಸ್ಮಾರಕ ಉದ್ಘಾಟನೆ’
‘ಹಾಸನ ಜಿಲ್ಲೆಯ ಯಸಳೂರು ಅರಣ್ಯದಲ್ಲಿ 2023ರ ಡಿ. 4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟ ದಸರಾ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನನ ಸ್ಮಾರಕವನ್ನು ಫೆಬ್ರುವರಿ ಮೊದಲ ವಾರ ಉದ್ಘಾಟಿಸಲಾಗುವುದು. ಸ್ಮಾರಕ ಅರಣ್ಯ ಪ್ರದೇಶದಲ್ಲಿದ್ದು ಸಾರ್ವಜನಿಕರ ದರ್ಶನಕ್ಕೆ ತೊಡಕಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು’ ಎಂದು ಸಚಿವರು ತಿಳಿಸಿದರು.
ಬಳ್ಳೆಯಲ್ಲೂ ಸ್ಮಾರಕ: ಕಾಕನಕೋಟೆಯಲ್ಲಿ 1968ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದ್ದ ಅರ್ಜುನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿದ್ದ. ಹೀಗಾಗಿ ಬಳ್ಳೆಯಲ್ಲಿ ಕೂಡ ಸ್ಮಾರಕ ನಿರ್ಮಿಸಲಾಗಿದ್ದು ಫೆಬ್ರುವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಆ ಸ್ಮಾರಕವನ್ನೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.