ADVERTISEMENT

ಕೆಸರು ರಸ್ತೆಯಲ್ಲಿ ಸಿಲುಕಿದ ಜೀಪು: ಕಾಲ್ನಡಿಗೆಯಲ್ಲಿ ಸಾಗಿದ ಸಚಿವ ಅಂಗಾರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 20:13 IST
Last Updated 8 ಆಗಸ್ಟ್ 2021, 20:13 IST
ಸುಳ್ಯದಲ್ಲಿ ಸಚಿವ ಎಸ್. ಅಂಗಾರ ತೆರಳುತ್ತಿದ್ದ ಜೀಪು ರಸ್ತೆ ಮಧ್ಯೆ ಅರ್ಧದಲ್ಲಿ ಬಾಕಿಯಾಗಿದ್ದು, ಸಚಿವರ ಬೆಂಬಲಿಗರು ತಳ್ಳಿದರು
ಸುಳ್ಯದಲ್ಲಿ ಸಚಿವ ಎಸ್. ಅಂಗಾರ ತೆರಳುತ್ತಿದ್ದ ಜೀಪು ರಸ್ತೆ ಮಧ್ಯೆ ಅರ್ಧದಲ್ಲಿ ಬಾಕಿಯಾಗಿದ್ದು, ಸಚಿವರ ಬೆಂಬಲಿಗರು ತಳ್ಳಿದರು   

ಸುಳ್ಯ: ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ತಮ್ಮ ಕ್ಷೇತ್ರದಲ್ಲಿ ಜೀಪಿನಲ್ಲಿ ತೆರಳುತ್ತಿದ್ದಾಗ, ಕೆಸರುಮಯವಾದ ರಸ್ತೆಯ ನಡುವೆ ಜೀಪ್ ನಿಂತುಹೋದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶನಿವಾರ ಗಡಿ ಪ್ರದೇಶಕ್ಕೆ ತೆರಳುವಾಗ ರಸ್ತೆ ಅವ್ಯವಸ್ಥೆಯ ಕಾರಣಕ್ಕೆ ಕಾರನ್ನು ಬಿಟ್ಟು ಅನಿವಾರ್ಯವಾಗಿ ಅವರು ಜೀಪ್‌ ಹತ್ತಿದ್ದರು. ರಸ್ತೆಯ ಏರಿನಲ್ಲಿ ಸಚಿವರು ಹೋಗುತ್ತಿದ್ದ ಜೀಪು ಮುಂದೆ ಚಲಿಸದೆ ಬಾಕಿಯಾಯಿತು. ಜೀಪಿನಿಂದ ಕೆಳಗಿಳಿದು ಸಚಿವರು ಕಾಲ್ನಡಿಗೆಯಲ್ಲಿ ಸಾಗಿದರೆ, ಕಾರ್ಯಕರ್ತರು ಜೀಪನ್ನು ತಳ್ಳಿದರು.

ಆಲೆಟ್ಟಿ– ಕೂಟೇಲು ಸಂಪರ್ಕ ರಸ್ತೆ ಹಲವಾರು ವರ್ಷಗಳಿಂದ ದುಃಸ್ಥಿತಿಯಲ್ಲಿದ್ದು, ಕಳೆದ ಚುನಾವಣೆ ಸಂದರ್ಭದಲ್ಲಿ ಸ್ಥಳೀಯರು ಮತದಾನ ಬಹಿಷ್ಕರಿಸಿದ್ದರು. ಆ ವೇಳೆ ಅಂಗಾರ ಸ್ಥಳಕ್ಕೆ ತೆರಳಿ, ಮುಂದಿನ ಬಾರಿ ರಸ್ತೆ ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದರು. ಎರಡನೇ ಬಾರಿ ಸಚಿವ ಸ್ಥಾನ ಪಡೆದು, ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು, ಇದೇ ರಸ್ತೆಯಲ್ಲಿ ತೆರಳುತ್ತಿದ್ದಾಗ ಜೀಪ್ ರಸ್ತೆ ನಡುವೆ ಬಾಕಿಯಾಯಿತು.

ADVERTISEMENT

ಜಾಲತಾಣದಲ್ಲಿ ವ್ಯಾಪಕ ಟೀಕೆ

ಅಂಗಾರ ಅವರ ಜೀಪ್‌ನ ವಿಡಿಯೊ ವೈರಲ್‌ ಆಗುತ್ತಿದ್ದಂತೆ, ‘ಮೂರು ದಶಕಗಳಿಂದ ನಿರಂತರವಾಗಿ ಬಿಜೆಪಿಯನ್ನು ಗೆಲ್ಲಿಸಿದ ಸುಳ್ಯ ಕ್ಷೇತ್ರ ಬದಲಾಗುವುದು ಯಾವಾಗ’ ಎಂದು ಕ್ಷೇತ್ರದ ಜನರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಿಸಿದ್ದಾರೆ.

‘ಕಾಶ್ಮೀರ ಬದಲಾಯಿತು, ಅಯೋಧ್ಯೆಯಲ್ಲಿ ಮಂದಿರವರಳಿತು, ಮೂರು ದಶಕಗಳಿಂದ ಬಿಜೆಪಿಯನ್ನು ಗೆಲ್ಲಿಸಿದ ಸುಳ್ಯ ಬದಲಾಗುವುದೆಂದು’ ಎಂದು ಕೆಲವರು ವಿಡಿಯೊಕ್ಕೆ ಕಾಮೆಂಟ್ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.