ADVERTISEMENT

ರೈಲ್ವೆ ವಿಭಾಗವಾದ ಬಳಿಕವೇ ಜಿಲ್ಲೆಗೆ ಬರ್ತೀನಿ ಅಂದಿದ್ದ ಅಂಗಡಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 17:09 IST
Last Updated 23 ಸೆಪ್ಟೆಂಬರ್ 2020, 17:09 IST
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ   

ಕಲಬುರ್ಗಿ: ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಕಲಬುರ್ಗಿ ರೈಲ್ವೆ ವಿಭಾಗಕ್ಕೆ ಅನುಮೋದನೆ ಕೊಟ್ಟ ಬಳಿಕವೇ ಜಿಲ್ಲೆಗೆ ಕಾಲಿಡುವುದಾಗಿ ಶಪಥ ಮಾಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ವಲಯ ಅಸ್ತಿತ್ವಕ್ಕೆ ಬರುವ ಮುಂಚೆಯೇ ಅಸ್ತಂಗತರಾಗಿದ್ದಾರೆ.

ಈ ಕುರಿತು ವ್ಯಾಪಕ ಹೋರಾಟ ನಡೆದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರೈಲ್ವೆ ಹೋರಾಟ ಸಮಿತಿ ಸದಸ್ಯರೊಂದಿಗೆ ಮಾತನಾಡಿ ಈ ಭರವಸೆ ನೀಡಿದ್ದರು. ‘ಹಿಂದೆ ಏನಾಗಿದೆಯೋ ಗೊತ್ತಿಲ್ಲ. ಆದರೆ, ನಾನು ಕಲಬುರ್ಗಿಗೆ ಬರುವುದಾದರೆ ವಲಯಕ್ಕೆ ಅನುಮೋದನೆ ಪಡೆದುಕೊಂಡೇ ಬರುತ್ತೇನೆ ಎಂದಿದ್ದರು. ಆ ಬಗ್ಗೆ ಚರ್ಚಿಸಲು ಕಳೆದ ಸೆ 19ರಂದು ಬೆಳಗಾವಿಯಲ್ಲಿ ತಮ್ಮ ಭೇಟಿಗೆ ಅನುಮತಿಯನ್ನೂ ನೀಡಿದ್ದರು. ಅಷ್ಟರಲ್ಲಿ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿಂದ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದರು. ಹೀಗಾಗಿ, ಕೋವಿಡ್‌ನಿಂದ ಗುಣಮುಖರಾದ ಬಳಿಕ ನಮಗೆ ಬರುವಂತೆ ಅವರ ಸಹಾಯಕರ ಮೂಲಕ ಕರೆ ಮಾಡಿಸಿದ್ದರು’ ಎಂದು ರೈಲ್ವೆ ಹೋರಾಟಗಾರ ಸುನೀಲ ಕುಲಕರ್ಣಿ ನೆನಪಿಸಿಕೊಂಡರು.

ರಾಜ್ಯದಿಂದ ಇತ್ತೀಚಿನ ವರ್ಷಗಳಲ್ಲಿ ಬಸನಗೌಡ ಆರ್.ಪಾಟೀಲ ಯತ್ನಾಳ ಹಾಗೂ ಡಿ.ವಿ.ಸದಾನಂದ ಗೌಡ ಅವರು ರೈಲ್ವೆ ಸಚಿವರಾಗಿದ್ದರು. ಅವರಿಗಿಂತಲೂ ಅಂಗಡಿ ಅವರು ಹೆಚ್ಚು ಆಸಕ್ತಿ ವಹಿಸಿ ರಾಜ್ಯದ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರು ಎಂದು ಕುಲಕರ್ಣಿ ಸಚಿವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ರೈಲ್ವೆ ಹೋರಾಟದ ಕಾವು ಹೆಚ್ಚಾಗಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಅಂಗಡಿ ಅವರು, ‘ನ್ಯಾಯಯುತವಾಗಿ ಕಲಬುರ್ಗಿಯಲ್ಲಿ ವಲಯ ಕಚೇರಿ ಆಗಬೇಕು. ಹಿಂದೆ ನಡೆದ ವಿದ್ಯಮಾನಗಳ ಬಗ್ಗೆ ಗೊತ್ತಿಲ್ಲ. ಆದರೆ, ಅವಧಿ ಮುಗಿಯುವುದರೊಳಗಾಗಿ ವಲಯ ಘೋಷಣೆ ಮಾಡಿ ಕಾಮಗಾರಿ ಆರಂಭಿಸುತ್ತೇನೆ’ ಎಂದಿದ್ದರು.

ಟ್ವಿಟ್ಟರ್ ಅಭಿಯಾನಕ್ಕೆ ಸ್ಪಂದನೆ: ಪ್ರತಿ ಬಾರಿ ದೀಪಾವಳಿ, ಯುಗಾದಿ, ಸಂಕ್ರಾಂತಿ ಸಂದರ್ಭದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿಗೆ ವಿಶೇಷ ರೈಲು ಬಿಡುತ್ತಿದ್ದರು. ಆದರೆ, ಕಲಬುರ್ಗಿ, ಬೀದರ್‌ಗೆ ರೈಲು ಸೌಲಭ್ಯ ಇರುತ್ತಿರಲಿಲ್ಲ. ಇದನ್ನು ಪ್ರಶ್ನಿಸಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹೋರಾಟಗಾರರು, ಪ್ರಯಾಣಿಕರು ಟ್ವಿಟ್ಟರ್ ಅಭಿಯಾನವನ್ನು ಆರಂಭಿಸಿದ್ದರು. ಇದಕ್ಕೆ ಸ್ಪಂದಿಸಿದ ಅಂಗಡಿ ಅವರು ಮೂರೂ ಹಬ್ಬಗಳಿಗೆ ಬೆಂಗಳೂರಿನಿಂದ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು ಆರಂಭಿಸಿದ್ದರು.

ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಅಧ್ಯಕ್ಷ ಅಮರನಾಥ ಪಾಟೀಲ, ‘ಕರ್ನಾಟಕ ರೈಲ್ವೆ ಅಭಿವೃದ್ಧಿಗೆ ಅಲ್ಪಾವಧಿಯಲ್ಲಿಯೇ ಸುರೇಶ್ ಅಂಗಡಿಯವರು ಅಪಾರವಾದ ಕೊಡುಗೆ ಕೊಟ್ಟು ಜನ ಮನ್ನಣೆ ಗಳಿಸಿದ್ದರು’ ಎಂದು ಸ್ಮರಿಸಿದರು.

ಇನ್ನಷ್ಟು ಓದು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.