ADVERTISEMENT

ಲಾಕ್‌ಡೌನ್‌ ತೆರವಿಗೆ ತಯಾರಿ: ಐದು ಹಂತಗಳಲ್ಲಿ ನಿಯಮ ಸಡಿಲಿಕೆ

ಮುಂದಿನ ವಾರ ನಿರ್ಬಂಧಗಳನ್ನು ಸಡಿಲಿಸುವ ಸುಳಿವು ನೀಡಿದ ಆರ್. ಅಶೋಕ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 20:03 IST
Last Updated 9 ಜೂನ್ 2021, 20:03 IST
ಲಾಕ್‌ಡೌನ್‌ ಘೋಷಣೆಯಾದಾಗ ಊರಿನತ್ತ ಹೊರಟಿದ್ದ ವಲಸಿಗರು–ಸಾಂದರ್ಭಿಕ ಚಿತ್ರ
ಲಾಕ್‌ಡೌನ್‌ ಘೋಷಣೆಯಾದಾಗ ಊರಿನತ್ತ ಹೊರಟಿದ್ದ ವಲಸಿಗರು–ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿರುವುದರಿಂದ ಜೂನ್‌ 14ರ ಬಳಿಕ ನಾಲ್ಕರಿಂದ ಐದು ಹಂತಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಈ ಸುಳಿವು ನೀಡಿದ್ದಾರೆ. ‘ಒಂದೇ ಹಂತದಲ್ಲಿ ಲಾಕ್‌ಡೌನ್‌ ತೆರವುಗೊಳಿಸುವ ಉದ್ದೇಶವಿಲ್ಲ. ಹಾಗೆ ಮಾಡಿದರೆ ಕೋವಿಡ್‌ ಪ್ರಕರಣಗಳು ಇದಕ್ಕಿದ್ದಂತೆ ಏರಿಕೆಯಾಗುತ್ತದೆ. ಹೀಗಾಗಿ, ಹಂತ ಹಂತಗಳಲ್ಲಿ ತೆರವುಗೊಳಿಸಲಾಗುವುದು. ಮೊದಲ ಹಂತದಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸುವ ಸಮಯವನ್ನು ವಿಸ್ತರಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದರು.

‘ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಲು ಕೆಲವು ಜಿಲ್ಲೆಗಳ ಜಿಲ್ಲಾಡಳಿತದ ಜತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದೇ 11–12 ರಂದು ಸಭೆ ನಡೆಸಲಿದ್ದಾರೆ. ಜಿಲ್ಲೆಯ ಪರಿಸ್ಥಿತಿ ಪರಾಮರ್ಶಿಸಿ, ಯಾವು ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಲಾಕ್‌ಡೌನ್ ತೆರವುಗೊಳಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕೋವಿಡ್ ದೃಢ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಲಾಕ್‌ಡೌನ್‌ ಅನ್ನು ಹಂತಹಂತವಾಗಿ ತೆರವುಗೊಳಿಸಿ ಪರಿಶೀಲಿಸಲಾಗುವುದು. ಬಳಿಕ, ಅದನ್ನು ಉಳಿದ ಜಿಲ್ಲೆಗಳಿಗೂ ವಿಸ್ತರಿಸುವ ಲೆಕ್ಕಾಚಾರವೂ ಸರ್ಕಾರದ ಮುಂದಿದೆ’ ಎಂದೂ ಮೂಲಗಳು ಹೇಳಿವೆ.

ಏಕಕಾಲಕ್ಕೆ ಲಾಕ್‌ಡೌನ್ ತೆರವು ಮಾಡಿದರೆ, ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಂತಹಂತವಾಗಿ ನಿಯಮಗಳನ್ನು ಸಡಿಲಗೊಳಿಸಲು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಈಗಾಗಲೇ ಸಲಹೆಗಳನ್ನು ನೀಡಿದೆ.

ಯಾವ ಜಿಲ್ಲೆಗಳು ಮತ್ತು ಪ್ರದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಅಧಿಕ ಇವೆಯೋ ಅಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಬೇಕು. ಹೆಚ್ಚು ಪ್ರಕರಣಗಳು ಇರುವ ಪ್ರದೇಶಗಳ ಜನರು ಕಡಿಮೆ ಸಂಖ್ಯೆ ಇರುವ ಪ್ರದೇಶಕ್ಕೆ ಪ್ರವೇಶ ನೀಡಬಾರದು. ಇಡೀ ವರ್ಷ ಯಾವುದೇ ರೀತಿ ರ್‍ಯಾಲಿಗಳು, ಬೃಹತ್ ಸಭೆಗಳಿಗೆ ಅವಕಾಶ ನೀಡಬಾರದು. ತಜ್ಞರು ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಬೇಕು ಎಂದೂ ಸಮಿತಿ ಹೇಳಿದೆ.

ಧಾರ್ಮಿಕ ಕೇಂದ್ರಗಳಿಗೆ ಸದ್ಯಕ್ಕೆ ಅನುಮತಿ ಇಲ್ಲ?

ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ಸಾರ್ವಜನಿಕರಿಗೆ ಜೂನ್‌ ಕೊನೆಯವರೆಗೆ ತೆರೆಯಲು ಅವಕಾಶವಿಲ್ಲ. ಇವುಗಳಿಗೆ ಮುಂದಿನ ಹಂತಗಳಲ್ಲಿ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಅದೇ ರೀತಿ, ಸಿನಿಮಾ ಮಂದಿರಗಳಲ್ಲಿ ಆರಂಭದಲ್ಲಿ ಶೇ 50 ರಷ್ಟು ಅವಕಾಶ, ನಂತರದ ಹಂತದಲ್ಲಿ ಶೇ 100 ರಷ್ಟು ಜನರಿಗೆ ವೀಕ್ಷಣೆಗೆ ಅನುಮತಿ ನೀಡಲಾಗುವುದು. ಇವುಗಳನ್ನು ಅತ್ಯಧಿಕ ಅಪಾಯದ ಸ್ಥಳಗಳು ಎಂದು ವರ್ಗೀಕರಿಸಲಾಗಿದೆ.

ಸಮಿತಿಯ ಸಲಹೆಗಳೇನು?

* ಮೊದಲ ಹಂತದಲ್ಲಿ ಮಾರುಕಟ್ಟೆಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ತೆರೆಯಲು ಅವಕಾಶ ನೀಡಲಾಗುವುದು. ಆ ನಂತರದ ಹಂತದಲ್ಲಿ ಒಟ್ಟು 10 ಗಂಟೆಗಳ ಅವಧಿ ವಹಿವಾಟು ನಡೆಸಲು ಅವಕಾಶ.

* ಮಾಲ್‌ಗಳು, ಶಾಪಿಂಗ್‌ ಕಾಂಪ್ಲೆಕ್ಸ್‌ ಮತ್ತು ಶಾಪಿಂಗ್‌ ಮಳಿಗೆಗಳನ್ನು ಆರಂಭದಲ್ಲಿ 4 ತಾಸುಗಳು ತೆರೆಯಬಹುದು. ಆ ಬಳಿಕ 10 ತಾಸುಗಳಷ್ಟು ಅವಧಿ ವಹಿವಾಟು ನಡೆಸಲು ಅನುಮತಿ ನೀಡಲಾಗುವುದು. ನಂತರ ದಿನಪೂರ್ತಿ ತೆರೆಯಲು ಅನುಮತಿ.

* ರೆಸ್ಟೋರೆಂಟ್‌, ಕೆಫೆಟೇರಿಯಾ, ಪಬ್‌ ಮತ್ತು ಬಾರ್‌ಗಳು ಆರಂಭದಲ್ಲಿ 4 ಗಂಟೆ ತೆರೆಯಬಹುದು. ಆ ಬಳಿಕ 10 ಗಂಟೆ ತೆರೆಯಲು ಅವಕಾಶ. ಮೊದಲಿಗೆ ಶೇ 50 ರಷ್ಟು ಜನರು ಕುಳಿತುಕೊಳ್ಳಲು ಅವಕಾಶ. ನಂತರದ ಹಂತದಲ್ಲಿ ಶೇ 100 ರಷ್ಟು ಜನರು ಕುಳಿತು ಆಹಾರ ಸೇವನೆಗೆ ಅವಕಾಶ ನೀಡಲಾಗುವುದು.

* ಕಲ್ಯಾಣ ಮಂಟಪಗಳಲ್ಲಿ ವಿವಾಹ ಮತ್ತು ಆಡಿಟೋರಿಯಂಗಳ ಸಮಾರಂಭಗಳಲ್ಲಿ ಮೊದಲಿಗೆ ಆಸನದ ಸಾಮರ್ಥ್ಯದ ಶೇ 50 ರಷ್ಟು, ನಂತರದ ಹಂತದಲ್ಲಿ ಶೇ 100ರಷ್ಟು ಜನರು ಹಾಜರಾಗಲು ಅವಕಾಶ. ಆದರೆ, ಈ ವರ್ಷದ ಡಿಸೆಂಬರ್‌ ವರೆಗೆ 100 ರಿಂದ 200 ಜನ ಮಾತ್ರ ಪಾಲ್ಗೊಳ್ಳಬಹುದು. ಹಾಜರಾಗುವವರು ಪಾಸ್‌ ಪಡೆದುಕೊಳ್ಳುವುದು ಕಡ್ಡಾಯ.

* ಕೈಗಾರಿಕೆಗಳಲ್ಲಿ ಆರಂಭದಲ್ಲಿ ಶೇ50ರಷ್ಟು ಆ ಬಳಿಕ ಶೇ 100 ಉದ್ಯೋಗಿಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಬಹುದು.

* ಬಸ್‌ ಮತ್ತು ಇತರ ಸಾರಿಗೆ ವಾಹನಗಳಲ್ಲಿ ಆರಂಭದಲ್ಲಿ ಶೇ 50ರಷ್ಟು ನಂತರದ ಹಂತದಲ್ಲಿ ಶೇ 100ರಷ್ಟು ಪ್ರಯಾಣಿಕರನ್ನು ಒಯ್ಯಲು ಅನುಮತಿ ನೀಡಲಾಗುವುದು.

* 1 ರಿಂದ 12ನೇ ತರಗತಿವರೆಗೆ ಆನ್‌ಲೈನ್‌, ವಿದ್ಯಾಗಮ. ತರಗತಿಗೆ ಹಾಜರಾಗಬೇಕಿದ್ದರೆ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಅವಕಾಶ. ನಂತರದ ಹಂತದಲ್ಲಿ ಶೇ 100ರಷ್ಟು ವಿದ್ಯಾರ್ಥಿಗಳಿಗೆ ಅವಕಾಶ.

* ಉದ್ಯಾನಗಳಲ್ಲಿ ವಾಕ್‌ ಮಾಡಲು 60 ವರ್ಷ ವಯಸ್ಸಿನ ಕೆಳಗಿನವರಿಗೆ ಬೆಳಿಗ್ಗೆ ಮತ್ತು ಸಂಜೆ ತಲಾ ಮೂರು ಗಂಟೆ ಅವಕಾಶ.

* ರೆಸಾರ್ಟ್‌, ಕ್ಲಬ್‌, ಕ್ಲಬ್‌ ಹೌಸ್‌, ಕ್ರೀಡಾಂಗಣ, ಜಿಮ್‌ ಮತ್ತು ಯೋಗ ಕೇಂದ್ರಗಳು, ಸಲೂನ್‌ಗಳು, ಸ್ಪಾಗಳು, ಈಜುಕೊಳಗಳಲ್ಲಿ ಶೇ 50 ರಷ್ಟು ಜನರಿಗೆ ಅವಕಾಶ. ನಂತರದ ಹಂತದಲ್ಲಿ ಸಂಖ್ಯೆ ಹೆಚ್ಚಿಸಲು ಅವಕಾಶ. ಇವುಗಳನ್ನು ಅಧಿಕ ಅಪಾಯದ ಸ್ಥಳಗಳು ಎಂದೂ ವರ್ಗೀಕರಿಸಲಾಗಿದೆ.

***

ಕೋವಿಡ್ ಪಾಸಿಟಿವಿಟಿ ದರ ಶೇ 5 ಕ್ಕಿಂತ ಕಡಿಮೆ ಅಥವಾ 5 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಇದ್ದರೆ ಲಾಕ್‌ಡೌನ್ ತೆರವು ಮಾಡಬಹುದು ಎಂಬ ಅಭಿಪ್ರಾಯ ಇದೆ.

- ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.