ಶಿವರಾಜ ತಂಗಡಗಿ
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸದೇ, ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಚಿಂತನೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೋಮವಾರ ಆಯೋಜಿಸಿದ್ದ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಶಸ್ತಿಗಳನ್ನು ಕೇಳಿ ಪಡೆಯುವಂತಾಗಬಾರದು. ಅರ್ಹರ ಮನೆ ಬಾಗಿಲಿಗೆ ಹೋಗಿ ಪ್ರಶಸ್ತಿ ನೀಡಿ ಗೌರವಿಸುವಂತಾಗಬೇಕು. ಆಗ ಪ್ರಶಸ್ತಿಯ ಮೌಲ್ಯ ಹೆಚ್ಚಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೂ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಅರ್ಜಿ ಸ್ವೀಕರಿಸದೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಚರ್ಚೆಗಳಾಗಬೇಕು. ನಾಡಿನ ಸಾಹಿತಿಗಳಿಂದ ಉತ್ತಮ ಸಲಹೆಗಳು ಬರಬೇಕು. ಪ್ರಾದೇಶಿಕ ನ್ಯಾಯ ಮತ್ತು ಸಾಮಾಜಿಕ ನ್ಯಾಯವನ್ನು ಪರಿಪಾಲನೆ ಮಾಡಿಕೊಂಡೇ ಅರ್ಹರನ್ನು ಗುರುತಿಸುವಂತಾಗಬೇಕು ಎಂದರು.
ಸಾಹಿತಿ ಹಂ.ಪ. ನಾಗರಾಜಯ್ಯ ಮಾತನಾಡಿ, ‘ಸ್ವಾತಂತ್ರ್ಯ ಈಗ ಬಂದಿದೆ ಎಂದು ಹೇಳುವ ಮಹಾನುಭಾವರು ಇರುವ ಈ ಕಾಲದಲ್ಲಿ ಸಾಹಿತಿಗಳು, ಬರಹಗಾರರು’ ಎಚ್ಚರದಿಂದ ಇರಬೇಕು’ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ‘ಲೇಖಕರು ಕಥೆ, ಕಾದಂಬರಿ ರಚನೆಗೆ ಸೀಮಿತವಾಗಬಾರದು. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಅಪಾಯದಲ್ಲಿದೆ. ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸೆ ಹೆಚ್ಚುತ್ತಿವೆ. ಈ ಬಗ್ಗೆಯೂ ಬರಹಗಾರರು ಧ್ವನಿ ಎತ್ತಬೇಕು’ ಎಂದು ಹೇಳಿದರು.
ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.