ಮಂಗಳೂರು:'ಪ್ರಧಾನಿ ನರೇಂದ್ರ ಮೋದಿಯವರ ಕಾರಣದಿಂದಾಗಿ ಪ್ರಧಾನಿಯ ಮಾತನ್ನೂ ಶಂಕಿಸುವ ಸ್ಥಿತಿ ನಿರ್ಮಾಣವಾಗಿದೆ' ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದರು.
'ಮುಂಬೈ ಮೇಲಿನ 26/11ರ ದಾಳಿಯ ಬಳಿಕ ಭಾರತೀಯ ವಾಯಪಡೆ ನಿರ್ದಿಷ್ಟ ದಾಳಿ ನಡೆಸಲು ಆಗಿನ ಯುಪಿಎ ಸರ್ಕಾರ ಅನುಮತಿ ನಿರಾಕರಿಸಿತ್ತು' ಎಂಬ ಪ್ರಧಾನಿಯವರ ಹೇಳಿಕೆಗೆ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಪ್ರತಿಕ್ರಿಯಿಸಿದರು.
'ಹಿಂದೆ ಪ್ರಧಾನಿ, ಮುಖ್ಯಮಂತ್ರಿಗಳ ಮಾತನ್ನು ಜನರು ಸಂಪೂರ್ಣವಾಗಿ ನಂಬುತ್ತಿದ್ದರು. ಆದರೆ ಮೋದಿಯವರ ಹೇಳಿಕೆಗಳಿಂದಾಗಿ ಪ್ರಧಾನಿಯ ಮಾತು ಕೂಡ ಅಂತೆ, ಕಂತೆಗಳ ಗುಂಪಿಗೆ ಸೇರುತ್ತಿದೆ. ಮಕ್ಕಳು ಕೂಡ ಪ್ರಧಾನಿಯ ಮಾತನ್ನು ಶಂಕಿಸುವ ವಾತಾವರಣ ನಿರ್ಮಾಣವಾಗಿದೆ' ಎಂದರು.
ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಕಡಿಮೆ ಮಾತನಾಡುತ್ತಿದ್ದರು. ಆದರೆ, ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಅವರ ಮಾತುಗಳಿಗೆ ಗೌರವ ಇತ್ತು. ಅವರ ಮಾತನ್ನು ಜಗತ್ತು ಒಪ್ಪುತ್ತಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.