ADVERTISEMENT

ಕಲಾಪ ವೇಳೆಯಲ್ಲಿ ಸಚಿವರ ಗೈರು: ಹೊರಟ್ಟಿ ಗರಂ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 16:06 IST
Last Updated 4 ಡಿಸೆಂಬರ್ 2023, 16:06 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ವಿಧಾನ ಪರಿಷತ್‌: ‘ಕಲಾಪ ನಡೆಯುವ ದಿನಗಳಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಲು ಅವಕಾಶ ನೀಡಬಾರದು’ ಎಂದು ಸಭಾನಾಯಕ ಎನ್‌.ಎಸ್‌. ಬೋಸರಾಜು ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ಸಿನ ಎಂ.ಎಲ್. ಅನಿಲ್‍ಕುಮಾರ್ ಅವರು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಕೇಳಿದ ಪ್ರಶ್ನೆಗೆ ಸಚಿವರ ಪರವಾಗಿ ಬೋಸರಾಜು  ಉತ್ತರಿಸಲು ಮುಂದಾದರು.

ಈ ವೇಳೆ ಅಸಮಾಧಾನಗೊಂಡ ಸಭಾಪತಿ, ‘ಕಲಾಪ ನಡೆಯುವ ವೇಳೆ ಸಂಬಂಧಪಟ್ಟ ಇಲಾಖೆಗಳ ಸಚಿವರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಪ್ರತಿಯೊಂದಕ್ಕೂ ಸಭಾನಾಯಕರು ಉತ್ತರಿಸುವ ಪರಿಸ್ಥಿತಿ ಬರಬಾರದು’ ಎಂದು ಸಲಹೆ ಮಾಡಿದರು.

ADVERTISEMENT

ಸಭಾಪತಿ ಮಾತಿಗೆ ದನಿಗೂಡಿಸಿದ ಬಿಜೆಪಿ ಸದಸ್ಯರು, ಸಂಬಂಧಪಟ್ಟ ‘ಇಲಾಖೆ ಸಚಿವರು ಸದನದಲ್ಲಿ ಹಾಜರಿರದಿದ್ದರೆ ಚರ್ಚೆ ನಡೆಯುವುದು ಹೇಗೆ? ಕಲಾಪ ನಡೆಯುತ್ತಿರುವ ವೇಳೆ ಸಚಿವರು ತೆಲಂಗಾಣಕ್ಕೆ ಹೋಗಿದ್ದಾರೆ. ಇದು ಸರಿಯೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಾಗಾದರೆ ನೀವು ಬೇರೆ ಸಂದರ್ಭಗಳಲ್ಲಿ ಇದನ್ನೇ ಮಾಡಿರಲಿಲ್ಲವೇ’ ಎಂದು ಕಾಂಗ್ರೆಸ್ಸಿನ ಯು.ಬಿ. ವೆಂಕಟೇಶ್ ತಿರುಗೇಟು ನೀಡಿದರು. ಆಗ ಬೋಸರಾಜು ‘ಸಚಿವರು ಬರುತ್ತಿದ್ದಾರೆ. ದಾರಿಯಲ್ಲಿದ್ದಾರೆ’ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.

ಆಸನಕ್ಕೆ ಹುಡುಕಾಡಿದ ವಿಶ್ವನಾಥ್!

ವಿಧಾನ ಪರಿಷತ್‌: ಸದನ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರ ಪ್ರವೇಶ ದ್ವಾರದ ಮೂಲಕ ಪರಿಷತ್‌ ಸಭಾಂಗಣ ಪ್ರವೇಶಿಸಿದ ಸದಸ್ಯ ಎಚ್‌. ವಿಶ್ವನಾಥ್‌ ಅವರು ತಮ್ಮ ಆಸನಕ್ಕಾಗಿ ತಡಕಾಡಿದ ಪ್ರಸಂಗ ನಡೆಯಿತು!

ಆಡಳಿತ ಪಕ್ಷದ ಸದಸ್ಯರು ಕುಳಿತಿದ್ದ ಸಾಲಿನಲ್ಲಿ ತಮ್ಮ ಹೆಸರಿರುವ ಆಸನವನ್ನು ವಿಶ್ವನಾಥ್‌ ಹುಡುಕುತ್ತಿದ್ದುದನ್ನು ಕಂಡ ಇತ್ತ ವಿರೋಧ ಪಕ್ಷದ ಸಾಲಿನಲ್ಲಿ ಆಸೀನರಾಗಿದ್ದ ಬಿಜೆಪಿಯ ತೇಜಸ್ವಿನಿಗೌಡ ಮತ್ತು ರಘುನಾಥ ರಾವ್ ಮಲ್ಕಾಪುರೆ ಅವರು ನಸುನಗುತ್ತಲೇ ಕೈ ಸನ್ನೆ ಮಾಡಿ ವಿಶ್ವನಾಥ್‌ ಅವರನ್ನು ‘ಇಲ್ಲಿದೆ ನಿಮ್ಮ ಆಸನ’ ಎಂದು ಕರೆದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.