ಬೆಂಗಳೂರು: ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ, ತಮ್ಮ ಮಾತು, ಪತ್ರಕ್ಕೆ ಕೆಲವು ಸಚಿವರು ಕಿಮ್ಮತ್ತು ನೀಡುವುದಿಲ್ಲವೆಂಬ ಆಕ್ರೋಶ– ಅಹವಾಲನ್ನು ಕಾಂಗ್ರೆಸ್ ಶಾಸಕರು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಳಿ ತೋಡಿಕೊಂಡಿದ್ದಾರೆ. ಕೆಲವರು ಸಮಸ್ಯೆಗಳನ್ನು ಹೇಳಿಕೊಂಡಿದ್ದು, ತಮಗೆ ಸ್ಪಂದಿಸದ ಸಚಿವರ ನಡೆಗೆ ಕಿಡಿಕಾರಿದ್ದಾರೆ.
ಆಳಂದ ಶಾಸಕ ಬಿ.ಆರ್. ಪಾಟೀಲ, ಕಾಗವಾಡ ಶಾಸಕ ರಾಜು ಕಾಗೆ ಅವರು ಇತ್ತೀಚೆಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅದರ ಬೆನ್ನಲ್ಲೆ, ಶಾಸಕರ ಅಹವಾಲು ಆಲಿಸಲು ಹೈಕಮಾಂಡ್ ನಿರ್ದೇಶನದಂತೆ ಸುರ್ಜೇವಾಲಾ ಅವರು ರಾಜ್ಯಕ್ಕೆ ಸೋಮವಾರ ದೌಡಾಯಿಸಿದ್ದಾರೆ. ಅವರು ಜುಲೈ 2ರವರೆಗೆ ರಾಜ್ಯದಲ್ಲಿ ಠಿಕಾಣಿ ಹೂಡಿ ಶಾಸಕರ ಮನದಾಳ ಅರಿಯಲಿದ್ದಾರೆ. ಬಿ.ಆರ್. ಪಾಟೀಲ ಸೇರಿ ಏಳು ಶಾಸಕರ ಜೊತೆ ಸೋಮವಾರ ಅವರು ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು.
‘ಸಚಿವರು ಕೈಗೆ ಸಿಗುವುದಿಲ್ಲ. ಸಿಕ್ಕಿದವರೂ ಮುಖ ಕೊಟ್ಟು ಮಾತನಾಡದೆ ನಿರ್ಲಕ್ಷಿಸುತ್ತಾರೆ. ನಮ್ಮ ಪತ್ರಗಳಿಗೆ ಕಿಮ್ಮತ್ತೇ ಇಲ್ಲ. ಇಲಾಖೆಗಳ ಅಧಿಕಾರಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಕೆಲವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಿಲ್ಲ. ಮುಖ್ಯಮಂತ್ರಿ ಒಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದನ್ನು ಬಿಟ್ಟು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಕೆಲವು ಶಾಸಕರು ಸುರ್ಜೇವಾಲಾ ಬಳಿ ಆಕ್ರೋಶ ಹೊರಹಾಕಿದ್ದಾರೆಂದು ಗೊತ್ತಾಗಿದೆ.
‘ವಸತಿ ಇಲಾಖೆಯಲ್ಲಿ ಲಂಚ ಪಡೆಯಲಾಗುತ್ತಿದೆ’ ಎಂದು ಆರೋಪಿಸಿದ್ದ ಬಿ.ಆರ್. ಪಾಟೀಲ ಅವರು ಕೆಲವು ದಾಖಲೆಗಳ ಜೊತೆಗೆ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದರು. ವಸತಿ ಹಂಚಿಕೆಯ ಸಂದರ್ಭದಲ್ಲಿ ಲಂಚದ ಬೇಡಿಕೆ ಯಾವ ರೀತಿಯಲ್ಲಿದೆ, ಹಿರಿಯ ಶಾಸಕನಾದರೂ ಯಾವ ರೀತಿ ಅನ್ಯಾಯವಾಗುತ್ತಿದೆ ಎಂಬುದು ಸೇರಿದಂತೆ ತಮಗಾಗಿರುವ ಅನುಭವಗಳನ್ನು ಪಾಟೀಲರು ಸುರ್ಜೇವಾಲಾ ಬಳಿ ಬಿಚ್ಚಿಟ್ಟಿದ್ದಾರೆ. ಅನುದಾನ ಬಿಡುಗಡೆ ವಿಳಂಬದ ಬಗ್ಗೆ ಆಕ್ರೋಶ ಹೊರಹಾಕಿದ್ದ ರಾಜು ಕಾಗೆ ಕೂಡಾ ಸುರ್ಜೇವಾಲಾ ಅವರನ್ನು ಸೋಮವಾರ ಭೇಟಿ ಮಾಡಬೇಕಿತ್ತು. ಆದರೆ, ಮಂಗಳವಾರ ಭೇಟಿ ಮಾಡುವುದಾಗಿ ಸಮಯಾವಕಾಶ ಪಡೆದಿದ್ದಾರೆ.
ಶಾಸಕರ ಭೇಟಿಯ ಕುರಿತಂತೆ ಮಾತನಾಡಿದ ಸುರ್ಜೇವಾಲಾ, ‘ಪಕ್ಷದ ಶಾಸಕರ ಭೇಟಿ ನಿರಂತರ ಪ್ರಕ್ರಿಯೆ. ಒಂದು ತಿಂಗಳು ಅಥವಾ ಒಂದೂವರೆ ತಿಂಗಳು ನಡೆಯಬಹುದು. ಈ ಸಮಯದಲ್ಲಿ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಸ್ಥರನ್ನೂ ಭೇಟಿ ಮಾಡುತ್ತೇನೆ. ಬಳಿಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಜೊತೆಗೂ ಅಭಿವೃದ್ಧಿ ವಿಚಾರವಾಗಿ ಚರ್ಚಿಸುತ್ತೇನೆ’ ಎಂದರು.
ಸುರ್ಜೇವಾಲಾ ಅವರು ನನ್ನನ್ನು ಸಭೆಗೆ ಕರೆಯದ ಕಾರಣ ನಾನು ಬೆಂಗಳೂರಿಗೆ ಹೋಗಿ, ಭೇಟಿಯಾಗುವುದಿಲ್ಲ. ಅಗತ್ಯ ಬಿದ್ದರೆ ನೋಡೋಣಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
‘ನಾನು ಏನು ಹೇಳಬೇಕಿತ್ತೊ ಅದನ್ನು ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು’ ಎಂದು ಬಿ.ಆರ್. ಪಾಟೀಲ ಪ್ರತಿಕ್ರಿಯಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸುರ್ಜೇವಾಲಾ ಅವರ ಜೊತೆ ಚರ್ಚೆ ಮಾಡಿದ್ದೇನೆ. ನಾನು ಹೇಳಬೇಕಾದದ್ದನ್ನು ಹೇಳಿದ್ದೇನೆ. ಅವರು ಎಲ್ಲ ವಿಚಾರಗಳನ್ನು ಟಿಪ್ಪಣಿ ಮಾಡಿಕೊಂಡಿದ್ದಾರೆ’ ಎಂದರು.
ರಣದೀಪ್‌ಸಿಂಗ್ ಸುರ್ಜೇವಾಲಾ ಅವರನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಭೇಟಿಯಾಗಿ, ನನ್ನ ಸಮಸ್ಯೆ ಹೇಳಿಕೊಳ್ಳುವೆಭರಮಗೌಡ (ರಾಜು) ಕಾಗೆ, ಕಾಂಗ್ರೆಸ್ ಶಾಸಕ
ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯಿಸಿದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ‘ಸಚಿವರ ಕಾರ್ಯವೈಖರಿ ಬಗ್ಗೆ ಹೇಳಿದ್ದೇನೆ. ಕೆಲವು ಸಚಿವರು ‘ನಾ ನಿನಗೆ ನೀ ನನಗೆ’ ಎಂಬಂತೆ ವರ್ತಿಸುತ್ತಿದ್ದಾರೆ. ಅದರಿಂದಲೇ ಸಮಸ್ಯೆಯಾಗಿದೆ’ ಎಂದರು.
‘ಕೋಲಾರ ಹಾಲು ಒಕ್ಕೂಟ ಚುನಾವಣೆ ಬಗ್ಗೆಯೂ ಸುರ್ಜೇವಾಲಾ ಅವರ ಗಮನಕ್ಕೆ ತಂದಿದ್ದೇನೆ. ಹಾಲು ಒಕ್ಕೂಟ ಚುನಾವಣೆ ಪಕ್ಷದ ಚುನಾವಣೆ ಅಲ್ಲ. ಹೀಗಾಗಿ ನಮ್ಮ ಸಮುದಾಯದ ಕಾರ್ಯಕರ್ತರಿಗೆ ನಾನು ಬೆಂಬಲ ನೀಡಿದ್ದೇನೆ. ಮಾಲೂರು ಶಾಸಕ ನಂಜೇಗೌಡ ಏನು ಹುಲಿಯೇ? ಸಿಂಹವೇ? ಅವರ ಬಳಿ ಕ್ರಷರ್ ಇದೆ ಎಂದು ಹೆದರಬೇಕೇ? ಡೇರಿಯಲ್ಲಿ ನಾನೇನು ಹಗರಣ ಮಾಡಿದ್ದೇನೆಯೇ? ನಂಜೇಗೌಡ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದವರು. ನಾನು ಹುಟ್ಟಾ ಕಾಂಗ್ರೆಸ್ಸಿಗ’ ಎಂದು ನಾರಾಯಣಸ್ವಾಮಿ ಕೆಂಡಾಮಂಡಲವಾದರು.
ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ‘ಪಕ್ಷದ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿತು. ಸುರ್ಜೇವಾಲಾ ಅವರ ಮುಂದೆ ನಮ್ಮ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ’ ಎಂದರು. ‘ಯಾವ ವಿಚಾರವನ್ನು ಎಲ್ಲೆಲ್ಲಿ ಮಾತನಾಡಬೇಕು ಅಲ್ಲೇ ಮಾತನಾಡಬೇಕು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮುಂದೆ ಮಾಡಬೇಕು. ಮಾತನಾಡಲು ಕೆಲವು ಇತಿಮಿತಿಗಳಿವೆ. ಅದನ್ನು ನೋಡಿಕೊಂಡೇ ಮಾತನಾಡಬೇಕು. ಶಾಸಕರಿಗೆ ಸಮಸ್ಯೆಗಳಿಲ್ಲವೆಂದು ಹೇಳುವುದಿಲ್ಲ. ಅದನ್ನು ಸರಿಪಡಿಸಬೇಕು’ ಎಂದರು.
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಜನರ ಕಷ್ಟ ಕೇಳಲು ರಾಜ್ಯಕ್ಕೆ ಬಂದಿಲ್ಲ. ಕಪ್ಪ ಕೇಳಲು ಬಂದಿದ್ದಾರೆಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ
ಹುಬ್ಬಳ್ಳಿ: ‘ಕಾಂಗ್ರೆಸ್ ಪಕ್ಷವು ಹೆಸರಿಗಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಿದ್ದು, ಅವರನ್ನು ಕೈಗೊಂಬೆ ಆಗಿಸಿಕೊಂಡಿದೆ. ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ಸ್ಥಿತಿ ಈಗ ಖರ್ಗೆ ಅವರಿಗೆ ಬಂದಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ಕೈಯಲ್ಲಿದೆ. ನಮಗೆ ಗೊತ್ತಾಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ಧಾರೆ. ಇದು ಕಾಂಗ್ರೆಸ್ ಪಕ್ಷ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನ. ಕಾಂಗ್ರೆಸ್‌ನಲ್ಲಿ ಹಿರಿಯ ರಾಜಕಾರಣಿಗಳಿಗೆ ಬೆಲೆಯಿಲ್ಲ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಆ ಪಕ್ಷದ ಶಾಸಕರೇ ತೆರೆದಿಟ್ಟಿದ್ದಾರೆ. ಶಾಸಕರು ಆಡಳಿತದ ವಿರುದ್ಧ ಸಿಡಿದೇಳುತ್ತಿದ್ದಾರೆ. ಹೀಗಾಗಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಶಾಸಕರ ಅಸಮಾಧಾನಕ್ಕೆ ತೇಪೆ ಹಚ್ಚಲು ಬಂದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.