ADVERTISEMENT

ಅಲ್ಪಸಂಖ್ಯಾತರ ಬಹುಪಯೋಗಿ ಭವನ ನಿರ್ಮಾಣಕ್ಕೆ ಬಿಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 16:13 IST
Last Updated 21 ನವೆಂಬರ್ 2025, 16:13 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ಬೆಂಗಳೂರು: ‘ಕಾಂಗ್ರೆಸ್‌ ಸರ್ಕಾರದ ಮುಸ್ಲಿಂ ತುಷ್ಟೀಕರಣಕ್ಕೆ ಇತಿಮಿತಿಯೇ ಇಲ್ಲ. ಈ ಸರ್ಕಾರವು ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ದೂರಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದವರು ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲು ಬಹುಪಯೋಗಿ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ₹67 ಕೋಟಿ ಮಂಜೂರು ಮಾಡಿದೆ ಎಂದು ‌‘ಪ್ರಜಾವಾಣಿ’ಯು ಶುಕ್ರವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈ ವರದಿಯನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಅಶೋಕ, ‘ಮುಸ್ಲಿಮರಿಗೆ ತುಷ್ಟೀಕರಣದ ಭಾಗ್ಯ, ಓಲೈಕೆ ಗ್ಯಾರಂಟಿ. ಹಿಂದೂಗಳಿಗೆ ತೆರಿಗೆ, ತೊಂದರೆ ಮತ್ತು ಚೊಂಬು ಗ್ಯಾರಂಟಿ’ ಎಂದಿದ್ದಾರೆ.

ADVERTISEMENT

‘ರೈತರಿಗೆ ನೆರೆ ಮತ್ತು ಬರ ಪರಿಹಾರ ನೀಡಲು, ಸರ್ಕಾರಿ ನೌಕರರಿಗೆ ವೇತನ ನೀಡಲು, ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸಲು, ರಸ್ತೆ ಗುಂಡಿ ಮುಚ್ಚಲು, ಮಕ್ಕಳ ಬಿಸಿಯೂಟಕ್ಕೆ ಸರ್ಕಾರದ ಬಳಿ ಹಣವಿಲ್ಲ. ಆದರೆ ಮುಸ್ಲಿಂ ಭವನಗಳ ನಿರ್ಮಾಣಕ್ಕೆ ₹67 ಕೋಟಿ ನೀಡಿದೆ. ಮುಸ್ಲಿಮರು ಮಾತ್ರವೇ ಇವರಿಗೆ ಮತ ಹಾಕಿದ್ದಾರಾ? ಹಿಂದೂಗಳು ಮತ ಹಾಕಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ವರದಿಯನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಜನಕಲ್ಯಾಣ ಮತ್ತು ಬಿಸಿಯೂಟ ಕಾರ್ಯಕ್ರಮಗಳಿಗೆ ಹಣವಿಲ್ಲ ಎನ್ನುವ ಸಿದ್ದರಾಮಯ್ಯ ಅವರು, ಮತಬ್ಯಾಂಕ್‌ ಗುರಿಯಾಗಿಸಿಕೊಂಡು ಒಂದು ಸಮುದಾಯಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿರುವುದು ಸಂವಿಧಾನಬಾಹಿರ’ ಎಂದಿದ್ದಾರೆ.

‘ರಾಜ್ಯದ ಸಮಗ್ರ ಅಭಿವೃದ್ಧಿಗೆ ಮೀಸಲಾಗಿರಬೇಕಾದ ಜನರ ಹಣವನ್ನು, ಒಂದು ಸಮುದಾಯದ ಸಂತೃಪ್ತಿಗೆ ಬಳಸುವುದು ಆಡಳಿತದ ಮೂಲ ತತ್ವಕ್ಕೆ ವಿರುದ್ಧವಾದುದು. ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಸಂವಿಧಾನಬದ್ಧ ಹೊಣೆಗಾರಿಕೆಗೆ ವಿರುದ್ಧವಾಗಿ ಕಾಂಗ್ರೆಸ್‌ ಸರ್ಕಾರ ನಡೆದುಕೊಂಡಿದೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.