ADVERTISEMENT

ಗೆಳೆಯರ ಜೊತೆ ಹುಬ್ಬಳ್ಳಿಯಲ್ಲಿ ಪತ್ತೆಯಾದ ರಾಯಚೂರು ಪಿಯುಸಿ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 13:37 IST
Last Updated 25 ಜುಲೈ 2022, 13:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಶನಿವಾರ ತೆರಳಿದ್ದ ರಾಯಚೂರು ಪಿಯುಸಿ ಕಾಲೇಜಿನನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದು ಪಾಲಕರು ಭಾನುವಾರ ನೀಡಿದ್ದ ದೂರು, ಕೊನೆಗೂ ಸುಖಾಂತ್ಯ ಕಂಡಿದೆ.

ಹುಬ್ಬಳ್ಳಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ಗೆಳೆಯರೊಂದಿಗೆ ಸೋಮವಾರ ಪತ್ತೆಯಾಗಿದ್ದು, ಪೊಲೀಸರು ವಾಪಸ್‌ ಕರೆತರುತ್ತಿದ್ದಾರೆ. ಪೊಲೀಸರು ಅಧಿಕೃತವಾಗಿ ಈ ಕುರಿತು ಮಾಹಿತಿ ನೀಡಿಲ್ಲ.

ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ರಾಯಚೂರಿನ ಸ್ಟೇಷನ್‌ ರಸ್ತೆಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದರು. ಇಬ್ಬರು ಶಕ್ತಿನಗರದ ನಿವಾಸಿಗಳು ಮತ್ತು ಇಬ್ಬರು ರಾಯಚೂರು ನಗರದ ನಿವಾಸಿಗಳು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್‌ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, ‘ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು ಕಾಲೇಜಿಗೂ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಕಾಲೇಜಿಗೂ ಹಾಜರಾಗಿಲ್ಲ. ಪೊಲೀಸರಿಗೆ ಕೇಳುವ ಮಾಹಿತಿಯನ್ನು ಕಾಲೇಜಿನಿಂದ ಒದಗಿಸಲಾಗುವುದು‘ ಎಂದಿದ್ದಾರೆ.

---

ಅನುಮಾನಸ್ಪದವಾಗಿ ವರ್ತಿಸುತ್ತಿದ್ದರು

ಹುಬ್ಬಳ್ಳಿ: ರಾಯಚೂರಿನಿಂದ ಶನಿವಾರ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಸೋಮವಾರ ಸಂಜೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

ಸಂಜೆ 3.30ರ ವೇಳೆ ಈ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ವರ್ತಿಸುತ್ತಿದ್ದರು. ರೈಲ್ವೆ ಭದ್ರತಾ ಸಿಬ್ಬಂದಿ ಅವರನ್ನು ವಿಚಾರಿಸಿದಾಗ ರಾಯಚೂರಿನಿಂದ ಬಂದವರು ಎಂದು ತಿಳಿದು ಬಂದಿದೆ. ತಕ್ಷಣ ಶಹರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳನ್ನು ಅವರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್‌ ಆನಂದ ಒಣಕುದರಿ, ‘ಪತ್ತೆಯಾದ ವಿದ್ಯಾರ್ಥಿಗಳು ರಾಯಚೂರಿನ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪ್ರಥಮ, ಪಿಯುಸಿ ಓದುತ್ತಿದ್ದಾರೆ. ಶನಿವಾರ ಅವರು ನಾಪತ್ತೆಯಾಗಿದ್ದು, ಅಲ್ಲಿಯ ಮಹಿಳಾ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಕುತೂಹಲಕ್ಕಾಗಿ ಸ್ನೇಹಿತರ ಜೊತೆಗೂಡಿ ಹುಬ್ಬಳ್ಳಿಗೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ರಾಯಚೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.