ADVERTISEMENT

ಸೇಡಂ ಶಾಸಕ ತೆಲ್ಕೂರ್‌, ಪತ್ನಿ, ಪುತ್ರನಿಗೂ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:26 IST
Last Updated 9 ಜುಲೈ 2020, 14:26 IST
ರಾಜಕುಮಾರ ಪಾಟೀಲ ತೆಲ್ಕೂರ
ರಾಜಕುಮಾರ ಪಾಟೀಲ ತೆಲ್ಕೂರ   

ಕಲಬುರ್ಗಿ: ಜಿಲ್ಲೆಯ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಅವರ ಪತ್ನಿ ಹಾಗೂ ಎಂಟು ವರ್ಷದ ಪುತ್ರನಿಗೂ ಕೋವಿಡ್‌–19 ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಶಾಸಕರ ಆಪ್ತ ಸಹಾಯಕರೊಬ್ಬರಿಗೆ ‌ಎರಡು ದಿನಗಳ ಹಿಂದೆ ಕೋವಿಡ್‌ ದೃಢಪಟ್ಟಿತ್ತು. ಅವರ ನೇರ ಸಂಪರ್ಕಕ್ಕೆ ಬಂದ ಕಾರಣ ಶಾಸಕರು, ಅವರ ಪತ್ನಿ ಹಾಗೂ ಪುತ್ರನ ಗಂಟಲು ದ್ರವ ಮಾದರಿ ತಪಾಸಣೆಗೆ ನೀಡಿದ್ದರು. ವರದಿ ಗುರುವಾರ ಬೆಳಿಗ್ಗೆ ಬಂದಿದ್ದು, ಮೂವರಿಗೂ ಪಾಸಿಟಿವ್‌ ಇರುವುದು ಗೊತ್ತಾಗಿದೆ.

ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿರುವ ಶಾಸಕರ ಕುಟುಂಬದವರು, ಅಲ್ಲಿನ ಫೋರ್ಟೀಸ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗೆ ದಾಖಲಾಗಿದ್ದಾರೆ. ಈವರೆಗೂ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಇನ್ನೊಂದೆಡೆ, ಶಾಸಕರ ಆಪ್ತ ಸಹಾಯಕನ ಕುಟುಂಬದ ನಾಲ್ವರು ಸದಸ್ಯರಿಗೂ ಸೋಂಕು ಅಂಟಿಕೊಂಡಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಕೋವಿಡ್‌ ಉಪಟಳ ಆರಂಭವಾದಾಗಿಂದ ಶಾಸಕರು ಕ್ಷೇತ್ರದಲ್ಲೇ ಇದ್ದುಕೊಂಡು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಸೇಡಂನವರೇ ಆದ ಅವರ ಆಪ್ತ ಸಹಾಯಕ ಇಡೀ ದಿನ ಶಾಸಕರೊಂದಿಗೇ ಕ್ಷೇತ್ರದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಜ್ವರ, ಕೆಮ್ಮು ಲಕ್ಷಣಗಳು ಕಂಡುಬಂದ ಮೇಲೆ ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗೆ ಗಂಟಲು ಮಾದರಿ ನೀಡಿದ್ದ. ಆದರೆ, ಇದನ್ನು ಶಾಸಕರಿಗೂ ತಿಳಿಸದೇ ಮುಚ್ಚಿಟ್ಟಿದ್ದ ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.