ADVERTISEMENT

ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 5:39 IST
Last Updated 18 ಏಪ್ರಿಲ್ 2023, 5:39 IST
ಗೌರಿಶಂಕರ್‌
ಗೌರಿಶಂಕರ್‌   

ನವದೆಹಲಿ: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚುನಾವಣಾ ಅಕ್ರಮದ ಆರೋಪ ಸಾಬೀತಾದ ಕಾರಣಕ್ಕೆ ಹೈಕೋರ್ಟ್‌ ಈ ತೀರ್ಪು ನೀಡಿತ್ತು.

‘ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಆರಿಸಿ ಬಂದಿದ್ದಾರೆ’ ಎಂಬ ಪ್ರಕರಣದಲ್ಲಿ ಗೌರಿಶಂಕರ್‌ ಆಯ್ಕೆಯನ್ನು ಅಸಿಂಧುಗೊಳಿಸಲಾಗಿತ್ತು.

ಹೈಕೋರ್ಟ್‌ನ ತೀರ್ಪು ಹೊರಬೀಳುತ್ತಲೇ, ಗೌರಿಶಂಕರ್ ಪರ ವಕೀಲರು, ‘ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವುದರಿಂದ ತೀರ್ಪಿಗೆ ತಡೆ ನೀಡಬೇಕು’ ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಪೀಠ, 30 ದಿನಗಳ ಕಾಲ ತನ್ನ ಆದೇಶವನ್ನು ಅಮಾನತಿನಲ್ಲಿ ಇರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಗೌರಿಶಂಕರ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, ‘ಸೂಕ್ತ ಸಮಯದಲ್ಲಿ ಈ ನ್ಯಾಯಾಲಯ ನೀಡುವ ನಿರ್ದೇಶನಗಳಿಗೆ ಒಳಪಟ್ಟು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮೇಲ್ಮನವಿದಾರರು ಅರ್ಹರು’ ಎಂದು ಹೇಳಿತು.

ADVERTISEMENT

‘ಪೀಠದ ಮುಂದಿನ ಆದೇಶಕ್ಕೆ ಬದ್ಧರಾಗಿರಬೇಕು. ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಮತದಾನ ಮಾಡಲು ಅನುಮತಿ ಪಡೆಯಬೇಕು’ ಎಂದು ಪೀಠವು ಷರತ್ತು ವಿಧಿಸಿತು. ‘ಮೇಲ್ಮನವಿದಾರರು ಶಾಸನಸಭೆಯ ಎಲ್ಲ ಸವಲತ್ತುಗಳು, ಭತ್ಯೆಗಳು ಹಾಗೂ ಪ್ರಯೋಜನಗಳನ್ನು
ಪಡೆಯಲು ಅರ್ಹರು. ಆದರೂ, ಸದನದಲ್ಲಿ ಯಾವುದೇ ಸಮಿತಿಗಳಲ್ಲಿ ಮತ ಚಲಾಯಿಸಲು
ಅರ್ಹರಾಗುವುದಿಲ್ಲ’ ಎಂದೂ ಹೇಳಿತು.

ಕರ್ನಾಟಕದ ವಿಧಾನಸಭೆಗೆ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೌರಿಶಂಕರ್‌ ಜಾತ್ಯತೀತ ಜನತಾ ದಳದಿಂದ (ಜೆಡಿಎಸ್‌) ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ 2018ರ ಮೇ 15ರಂದು ಘೋಷಿಸಿದ್ದರು.

ಗೌರಿಶಂಕರ್‌ 82,740 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಸುರೇಶ್‌ ಗೌಡ 77,110 ಮತಗಳನ್ನು ಪಡೆದು ಸೋತಿದ್ದರು. ‘ವಿಜೇತ ಅಭ್ಯರ್ಥಿ ಚುನಾವಣೆಯಲ್ಲಿ ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು’
ಎಂದು ಕೋರಿ ಸುರೇಶ್‌ ಗೌಡ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.