ADVERTISEMENT

ಡಿಕೆಶಿ ಏನೇ ಹೇಳಿದರೂ ತಲೆ ಮೇಲಿಟ್ಟುಕೊಂಡು ಸ್ವೀಕರಿಸುತ್ತೇನೆ: ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 12:37 IST
Last Updated 23 ಫೆಬ್ರುವರಿ 2026, 12:37 IST
   

ರಾಮನಗರ: ‘ಕೆಲವು ಸಚಿವರು ಶಾಸಕರ ಭೇಟಿಗೂ ಸಿಗುತ್ತಿಲ್ಲ. ಕೆಲಸ–ಕಾರ್ಯಗಳಿಗೂ ಸ್ಪಂದಿಸುತ್ತಿಲ್ಲ. ಸಚಿವರ ಈ ನಡೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಕ್ಕೆ ತಂದಿದ್ದೇವೆ. ನಾಯಕತ್ವ ಬದಲಾವಣೆ ಜೊತೆಗೆ ಸ್ಪಂದಿಸದ ಸಚಿವರ ಬದಲಾವಣೆಯ ಅಗತ್ಯವಿದೆ’ ಎಂದು ಡಿಸಿಎಂ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಒತ್ತಾಯಿಸಿದರು.

ಸಂಪುಟ ಪುನರ್ ರಚನೆಗಾಗಿ ಪಕ್ಷದ ಹೈಕಮಾಂಡ್‌ಗೆ ತಾವು ಸೇರಿದಂತೆ ಕೆಲ ಶಾಸಕರು ಪತ್ರ ಬರೆದಿರುವ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಸರಿಯಾಗಿ ಕೆಲಸ ಮಾಡದ ಸಚಿವರ ಮೇಲೆ ನನಗೆ ಅಸಮಾಧಾನವಿದೆ. ಅವರ ಹೆಸರನ್ನು ನಾನು ಹೇಳಲಿಚ್ಛಿಸುವುದಿಲ್ಲ. ನಾನು ಶಾಸಕನಾಗಿದ್ದರೂ ಸಚಿವರಿಗಿಂತ ಉತ್ತಮ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ಸಚಿವರು ಸರಿಯಾಗಿ ಕೆಲಸ ಮಾಡದ ಬಗ್ಗೆ ನಾವು ಚರ್ಚಿಸಿಯೇ ಪತ್ರ ಬರೆದಿದ್ದೇವೆ. ನಾವ್ಯಾರು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ. ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಒಳ್ಳೆಯ ಆಡಳಿತಬೇಕು. ಅದಕ್ಕಾಗಿ, ಕೆಲವರನ್ನು ಬದಲಾಯಿಸಿ ಎಂದು ಎರಡ್ಮೂರು ಸಭೆಯಲ್ಲಿ ಒತ್ತಾಯಿಸಿದ್ದೇವೆ. ಆರು ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಲೇ ಇದೆ’ ಎಂದು ತಿಳಿಸಿದರು.

ADVERTISEMENT

ದಲಿ‌ತ‌ ಸಿಎಂ ಕೂಗು ಕುರಿತ ಪ್ರಶ್ನೆಗೆ, ‘ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ಬಹಳ ದುಡಿದಿದ್ದಾರೆ. ಅವರಿಗೆ ಮುಖ್ಯಮಂತ್ರಿಯಾಗಲು ಒಂದು ಅವಕಾಶ ಕೊಡಿ ಎಂಬುದದಷ್ಟೇ ನಮ್ಮ ಬೇಡಿಕೆ. ಬೇರೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.

‘ಶಿವಕುಮಾರ್ ಅವರಿಗೆ ನನ್ನ ಮೇಲೆ, ನನಗೆ ಅವರ ಮೇಲೆ ಪ್ರೀತಿ ಜಾಸ್ತಿ. ಅವರು ಏನೇ ಹೇಳಿದರೂ ತಲೆ ಮೇಲಿಟ್ಟುಕೊಂಡು ಸ್ವೀಕರಿಸುತ್ತೇನೆ. ಅವರು ಸಿ.ಎಂ ಆಗಬೇಕೆಂಬ ಹೇಳಿಕೆಗೆ ನನ್ನ ಕೊನೆ ಉಸಿರಿರುವವರೆಗೆ ಬದ್ಧ’ ಎಂದು ಇಕ್ಬಾಲ್ ಹುಸೇನ್ ಬಾಯಿ ಮುಚ್ಚಿಕೊಂಡಿರಬೇಕು ಎಂಬ ಡಿಸಿಎಂ ಎಚ್ಚರಿಕೆ ಮಾತಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.