ADVERTISEMENT

ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ: ಎಸ್‌ಐಟಿ ಅಂತಿಮ ವರದಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 20:30 IST
Last Updated 30 ನವೆಂಬರ್ 2021, 20:30 IST
ಸಿ.ಡಿ ಪ್ರಕರಣ
ಸಿ.ಡಿ ಪ್ರಕರಣ   

ಬೆಂಗಳೂರು: ‘ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿರುವ ತನಿಖೆಯನ್ನು ಅನುಮೋದಿಸಲಾಗಿದೆ’ ಎಂದು ಎಸ್‌ಐಟಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಎಸ್‌ಐಟಿ ರಚನೆಯ ಸಿಂಧ್ವತ್ವ ಪ್ರಶ್ನಿಸಿ ಸಂತ್ರಸ್ತೆ, ವಕೀಲೆ ಗೀತಾ ಮಿಶ್ರಾ ಹಾಗೂ ಇತರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಎಸ್‌ಐಟಿ ಪರ ಹಾಜರಾಗಿದ್ದ ವಕೀಲ ಪಿ.ಪ್ರಸನ್ನ ಕುಮಾರ್, ‘ಎಸ್‌ಐಟಿ ತನಿಖಾ ವರದಿಗೆ ಸೌಮೇಂದು ಮುಖರ್ಜಿ ಅನುಮೋದನೆ ನೀಡಿದ್ದಾರೆ. ವರದಿಗೆ ಒಪ್ಪಿಗೆ ನೀಡಿ 2021ರ ನವೆಂಬರ್ 26ರಂದು ಆರು ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ವಿಚಾರಣಾ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ನೀಡಿರುವ ನಿರ್ಬಂಧದ ಆದೇಶವನ್ನು ತೆರವುಗೊಳಿಸಲು ಕೋರಿ ಎಸ್‌ಐಟಿ ಸೂಕ್ತ ಅರ್ಜಿ ಸಲ್ಲಿಸಲಿ. ಅದನ್ನು ಪರಿಶೀಲಿಸಲಾಗುವುದು ಹಾಗೂ ಎಲ್ಲರ ವಾದ ಆಲಿಸಲಾಗುವುದು’ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಇಂದಿರಾ ಜೈಸಿಂಗ್‌ ಆಕ್ಷೇಪ:ವಿಚಾರಣೆಗೂ ಮುನ್ನ, ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ವಿಚಾರಣಾ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಅನುಮತಿ ನೀಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಎಸ್‌ಐಟಿ ತನಿಖೆ ಸಿಆರ್‌ಪಿಸಿ ನಿಯಮಗಳಿಗೆ ಅನುಸಾರವಾಗಿ ನಡೆದಿಲ್ಲ. ಆರು ತಿಂಗಳ ಹಿಂದೆಯೇ ಎಫ್‌ಐಆರ್ ದಾಖಲಿಸಿದ್ದರೂ ಆರೋಪಿಯನ್ನು ಬಂಧಿಸಿಲ್ಲ. ಇದು ಹಿಂದಿನ ಗೃಹ ಸಚಿವರು ನೇಮಿಸಿದ ಎಸ್‌ಐಟಿ. ಅಷ್ಟಕ್ಕೂ, ಎಸ್‌ಐಟಿ ರಚಿಸುವ ಅಧಿಕಾರ ಗೃಹ ಸಚಿವರಿಗೆ ಇದೆಯೇ ಎಂಬುದೇ ಮೊದಲ ಪ್ರಶ್ನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸಿಆರ್‌ಪಿಸಿ ಪ್ರಕಾರ ತನಿಖೆ ಪೂರ್ಣಗೊಂಡಿರುವುದರಿಂದ ಎಸ್‌ಐಟಿಯು ತನ್ನ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿ ಮತ್ತು ದೂರುದಾರರು ಬೇಕಿದ್ದರೆ ಈ ವರದಿಯನ್ನು ಪ್ರಶ್ನಿಸಬಹುದು’ ಎಂದು ಹೇಳಿತು.

ಇದನ್ನು ಒಪ್ಪದ ಇಂದಿರಾ ಜೈಸಿಂಗ್, ‘ಎಸ್‌ಐಟಿ ರಚನೆಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ನಿರ್ಧಾರವಾಗುವತನಕ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗದು’ ಎಂದು ಆಕ್ಷೇಪಿಸಿದರು.

‘ಒಂದೊಮ್ಮೆ ನ್ಯಾಯಾಲಯವು ಎಸ್‌ಐಟಿ ತನಿಖೆಯು ಕಾನೂನುಬದ್ಧವಾಗಿ ನಡೆದಿದೆ ಎಂದು ನಿರ್ಧರಿಸಿದರೆ ಆಗ ಅದನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬಹುದಾಗಿದೆ. ಹಲವು ವರ್ಷಗಳಿಂದ ನ್ಯಾಯಾಲಯಗಳು ಎಸ್‌ಐಟಿ ರಚಿಸುತ್ತಿವೆ. ಇಲ್ಲಿ ಒಬ್ಬ ಸಚಿವರು ಇನ್ನೊಬ್ಬ ಸಚಿವರನ್ನು ರಕ್ಷಿಸಲು ಎಸ್‌ಐಟಿ ರಚಿಸಿದ್ದಾರೆ’ ಎಂದು ದೂರಿದರು.

ಇದನ್ನು ಒಪ್ಪದ ನ್ಯಾಯಪೀಠ, ‘ಕೋರ್ಟ್‌ ಮುಂದೆ ಎಲ್ಲರೂ ಒಂದೇ. ಎಲ್ಲರೂ ಸಮಾನರೇ. ಸಚಿವರಾಗಲೀ ಅಥವಾ ಮತ್ಯಾರೇ ಆದರೂ ಅಷ್ಟೆ. ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿತು.

ಆನ್‌ಲೈನ್‌ ವಿಚಾರಣೆ: ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡ ವ್ಯಕ್ತಿಗೆ ನೋಟಿಸ್‌

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸುತ್ತಿದ್ದ ವಿಚಾರಣೆ ವೇಳೆ ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡ ‘ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ’ ಎಂಬುವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಸಿಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಬೆಳಗಿನ ಕಲಾಪದಲ್ಲಿ ವಿಚಾರಣೆ ನಡೆಸಿತು. ಈ ವೇಳೆ ‘ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ’ ಎಂಬ ಹೆಸರಿನಲ್ಲಿ ವರ್ಚುವಲ್ ಮೂಲಕ ವಿಚಾರಣೆಗೆ ಲಾಗಿನ್‌ ಆಗಿದ್ದ ವ್ಯಕ್ತಿಯೊಬ್ಬರು ಅರೆನಗ್ನ ಸ್ಥಿತಿಯಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಇದನ್ನು ಸಿಡಿ ಪ್ರಕರಣದ ಸಂತ್ರಸ್ತೆಯ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನ್ಯಾಯಪೀಠದ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.