ADVERTISEMENT

ಶಿವಕುಮಾರ್‌ ಅವರೇ, ಪಾಟೀಲರ ಮೌನ ನಿಮಗೆ ಶಾಪವಾಗಿ ಪರಿಣಮಿಸುವುದಿಲ್ಲವೇ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2021, 9:43 IST
Last Updated 9 ಡಿಸೆಂಬರ್ 2021, 9:43 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಆರ್‌.ಪಾಟೀಲ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಡಿ.ಕೆ. ಶಿವಕುಮಾರ್‌ ಅವರೇ, ಎಸ್‌.ಆರ್‌.ಪಾಟೀಲರ ಸಾತ್ವಿಕ ಸಿಟ್ಟು ನಿಮ್ಮನ್ನು ಬಿಡುವುದೇ? ಪಾಟೀಲರ ಮೌನ ನಿಮಗೆ ಶಾಪವಾಗಿ ಪರಿಣಮಿಸುವುದರಲ್ಲಿ ಅನುಮಾನವಿದೆಯೇ? ಯಾರನ್ನು ಮೆಚ್ಚಿಸಲು ಒಬ್ಬ ಹಿರಿಯ ನಾಯಕನನ್ನು ರಾಜಕೀಯ ಸಂಧ್ಯಾಕಾಲದಲ್ಲಿ ಅತಂತ್ರವಾಗಿ ಮಾಡಿದಿರಿ?’ ಎಂದು ಪ್ರಶ್ನಿಸಿದೆ.

‘ಹಿರಿಯ ನಾಯಕ ಬಿಎಸ್‌ವೈ ಅವರಿಗೆ ಬಿಜೆಪಿ ಕಣ್ಣೀರು ಬರಿಸಿದೆ ಎಂದು ಸುಳ್ಳು ಆರೋಪ ಮಾಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ಅಘೋಷಿತ ಕೆಪಿಸಿಸಿ ಅಧ್ಯಕ್ಷೆ (ಲಕ್ಷ್ಮಿ ಹೆಬ್ಬಾಳ್ಕರ) ಅವರನ್ನು ಮೆಚ್ಚಿಸಲು ಆಕೆಯ ಸಹೋದರನಿಗೆ ಪರಿಷತ್ ಟಿಕೆಟ್‌ ನೀಡಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಎಸ್‌. ಆರ್.‌ ಪಾಟೀಲ್‌ ಅವರಲ್ಲಿ ಮೌನ ಕಣ್ಣೀರು ತರಿಸಿದ್ದು ಯಾರು?’ ಎಂದು ಬಿಜೆಪಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದೆ.

ADVERTISEMENT

ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್‌ ದ್ವಿಸದಸ್ಯ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಬಿಜೆಪಿಯ ಪಿ.ಎಚ್‌.ಪೂಜಾರ, ಕಾಂಗ್ರೆಸ್‌ನ ಸುನೀಲ್‌ಗೌಡ ಪಾಟೀಲ ಹಾಗೂ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್‌ಗೆ ಒಳ ಏಟಿನ ಭೀತಿ: ಹಾಲಿ ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ಗೌಡ ಪಾಟೀಲ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಅವರಿಗೆ ಟಿಕೆಟ್‌ ಲಭಿಸದಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಎಸ್‌.ಆರ್‌. ಪರ ಕಾಂಗ್ರೆಸಿಗರು ಈ ಚುನಾವಣೆಯಲ್ಲಿ ಯಾವ ‘ಆಟ’ ಆಡಲಿದ್ದಾರೆ ಎಂಬುದು ನಿಗೂಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.