ಬೆಂಗಳೂರು: ಹೆಚ್ಚುವರಿ ಬೋಧನೆಯ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ ನಂತರ ಮೊಬೈಲ್ ಫೋನ್ ಕರೆಯ ಮೂಲಕ ‘ಪರಿಹಾರ ಬೋಧನೆ’ ಮಾಡಬೇಕು ಎಂದು ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸರ್ಕಾರಿ ಶಾಲಾ ಶಿಕ್ಷಕರಿಗೆ ಸೂಚಿಸಿದೆ.
ಹೆಚ್ಚುವರಿ ಬೋಧನೆ ಅಗತ್ಯವಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ನಾಲ್ಕು ವಿದ್ಯಾರ್ಥಿಗಳಿಗೆ ಒಂದು ಗುಂಪುಗಳನ್ನು ರಚಿಸಬೇಕು. ಮುಖ್ಯವಾಗಿ ‘ಗಣಕ–ಗಣಿತ’ ಕಾರ್ಯಕ್ರಮದ ಅಡಿಯಲ್ಲಿ ಗಣಿತ ಕಲಿಕೆಗೆ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು. 3ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂಲಭೂತ ಗಣಿತ ಕಲಿಸಲು ವಾರಕ್ಕೆ ಕನಿಷ್ಠ ಒಂದು ದಿನ ಮೊಬೈಲ್ ಫೋನ್ ಕರೆಯ ಮೂಲಕ ಪಾಠ ಮಾಡಬೇಕು. ಪ್ರತಿ ಸಂವಾದದ ಅವಧಿ ಕನಿಷ್ಠ 30ರಿಂದ 40 ನಿಮಿಷಗಳಿಗಿಂತ ಕಡಿಮೆ ಇರಬಾರದು ಎಂದು ಡಿಎಸ್‌ಇಆರ್‌ಟಿ ಸುತ್ತೋಲೆ ಹೊರಡಿಸಿದೆ.
ದೂರವಾಣಿ ಮೂಲಕ ನಡೆದ ಪ್ರತಿಯೊಂದು ಪಾಠದ ವಿವರ, ಕರೆ ಅವಧಿ ಸೇರಿದಂತೆ ಎಲ್ಲ ಮಾಹಿತಿಯನ್ನು ಮುಖ್ಯ ಶಿಕ್ಷಕರಿಗೆ ನೀಡಬೇಕು. ಮುಖ್ಯ ಶಿಕ್ಷಕರು ‘ವಿದ್ಯಾರ್ಥಿ ಸಾಮರ್ಥ್ಯ ಪತ್ತೆ ವ್ಯವಸ್ಥೆಯಲ್ಲಿ (ಎಸ್‌ಎಟಿಎಸ್)’ ಅಪ್‌ಲೋಡ್ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ಪಾಲಕರನ್ನೂ ಒಳಗೊಳ್ಳುವಂತೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಮಕ್ಕಳಿಗೆ ತರಗತಿ ಅವಧಿಯ ನಂತರ ಕರೆ ಮಾಡಲು 2025ರ ಜುಲೈನಲ್ಲೇ 75,000 ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತು. ಈಗಾಗಲೇ ಇವರಿಗೆ ವಿಶೇಷ ತರಗತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪರಿಕಲ್ಪನೆಗಳನ್ನು ವಿವರಿಸಲು, ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ನೆರವಾಗಿದ್ದಾರೆ. ಈ ಕಾರ್ಯಕ್ಕಾಗಿ ಪ್ರತಿಯೊಬ್ಬ ಶಿಕ್ಷಕರಿಗೂ ₹800 ಭತ್ಯೆ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.