ADVERTISEMENT

‘ಬಿಡಿಸಿಕೊಂಡು ಹೋಗಿ ಎಂದಿದ್ದಕ್ಕೆ ಮುಂಬೈಗೆ ಹೋಗಿದ್ದು’

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:17 IST
Last Updated 12 ಜುಲೈ 2019, 19:17 IST
   

ಬೆಂಗಳೂರು: ‘ನಮ್ಮನ್ನು ಕಟ್ಟಿಹಾಕಿದ್ದಾರೆ, ಬಿಡಿಸಿಕೊಂಡು ಹೋಗಲು ಬಂದರೆ, ಜತೆಗೆ ಬರುತ್ತೇವೆ ಎಂದು ಶಾಸಕ ಗೋಪಾಲಯ್ಯ ಫೋನ್‌ ಮಾಡಿದ್ದರಿಂದಲೇ ನಾವು ಮುಂಬೈಗೆ ಹೋಗಿದ್ದು’.

‘ಅಲ್ಲಿ ಈ ರೀತಿ ಆಗುತ್ತದೆ ಎಂದು ಗೊತ್ತಿರಲಿಲ್ಲ. ಪೊಲೀಸರು ನಮಗೆ ಒಳಗೆ ಹೋಗಲು ಬಿಡಲೇ ಇಲ್ಲ. ಬೀದಿಯಲ್ಲೇ ನಿಂತು ತಿಂಡಿ ತಿನ್ನಬೇಕಾಯಿತು. ಬಿಜೆಪಿಯವರ ಚಿತಾವಣೆಯಿಂದಲೇ ಪೊಲೀಸರು ನಮಗೆ ಬಿಡಲೇ ಇಲ್ಲ’ ಎಂದು ಮೊಗಸಾಲೆಯಲ್ಲಿ ಅವಲತ್ತುಕೊಂಡಿದ್ದುಅರಸೀಕರೆ ಶಾಸಕ ಕೆ.ಎಂ. ಶಿವಲಿಂಗೇಗೌಡ.

‘ಮೊದಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಒಟ್ಟಿಗೆ ಹೋಗೋಣ ಎಂದು ಪ್ಲಾನ್ ಮಾಡಲಾಗಿತ್ತು. ಆದರೆ, ಕುಮಾರಸ್ವಾಮಿ ರಾಜೀನಾಮೆ ಕೊಡಲು ತಯಾರಿದ್ದೇನೆ ತಾವು ಮನವೊಲಿಸಲು ಬರುವುದಿಲ್ಲವೆಂದರು. ಸಿದ್ದರಾಮಯ್ಯ ಅವರೂ ಆಸಕ್ತಿ ತೋರಿಸಲಿಲ್ಲ. ಡಿ.ಕೆ.ಶಿವಕುಮಾರ್‌ ತಾವು ಹೋಗಲು ಸಿದ್ಧವಿರುವುದಾಗಿ ಹೇಳಿದರು’ ಎಂದರು.

ADVERTISEMENT

‘ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್‌ ಹೊರಟಿದ್ದರಿಂದ ನಮ್ಮ ಪಕ್ಷದಿಂದ ನನಗೆ ಹೋಗಲು ಸೂಚಿಸಿದರು. ಜತೆಗೆ ಇನ್ನೊಬ್ಬರು ಮಂತ್ರಿ ಇದ್ದರೆ, ಅಲ್ಲಿ ಮಾತನಾಡಲು ಸರಿ ಇರುತ್ತದೆ ಎಂಬ ಕಾರಣಕ್ಕೆ ಜಿ.ಟಿ.ದೇವೇಗೌಡರಿಗೆ ಹೇಳಲಾಯಿತು. ಕೇವಲ ಮೂರು ಜನ ಹೋಗುವುದು ಸರಿಯಲ್ಲ ಎಂದು ಶಾಸಕ ಬಾಲಕೃಷ್ಣ ಅವರನ್ನೂ ಸೇರಿಸಿಕೊಳ್ಳಲಾಯಿತು’ ಎಂದು ಹೇಳಿದರು.

‘ರಾಜೀನಾಮೆ ಕೊಟ್ಟವರೆಲ್ಲಾ ಒಂದಲ್ಲ ಒಂದು ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರ ಮೇಲೆ ಒತ್ತಡ ಇದೆ. ಹೆದರಿಸಿ ಇಟ್ಟಿದ್ದಾರೆ’ ಎಂದು ಶಿವಲಿಂಗೇಗೌಡ ಹೇಳಿದರು.

‘ಬಿಜೆಪಿಗೆ ಹೋದರೆ ಮಂತ್ರಿ ಸ್ಥಾನ ಸಿಗುವ ಮಾತು ಹಾಗಿರಲಿ, ಶಾಸಕ ಸ್ಥಾನ ಉಳಿಸಿಕೊಳ್ಳುವುದು ಕಷ್ಟ ಎಂಬ ಸತ್ಯ ಗೊತ್ತಾಗಿದ್ದರಿಂದಲೇ, ಗೋಪಾಲಯ್ಯ ವಾಪಾಸ್‌ ಬರಲು ಒಪ್ಪಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.