ADVERTISEMENT

ಸ್ವಾಮೀಜಿಗಳೊಂದಿಗೆ ಭಾಗವತ್‌ ವಿಡಿಯೊ ಸಂವಾದ

​ಪ್ರಜಾವಾಣಿ ವಾರ್ತೆ
Published 31 ಮೇ 2020, 20:49 IST
Last Updated 31 ಮೇ 2020, 20:49 IST
   

ಬೆಂಗಳೂರು: 'ಋಷಿ, ಕೃಷಿ ಹಾಗೂ ಕೊರೊನಾ ವೈರಸ್' ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ ಅವರು ಹಿಂದೂ ಧರ್ಮ ಆಚಾರ್ಯ ಮಹಾಸಭಾ ಹಾಗೂ ವಿವಿಧ ಸ್ವಾಮೀಜಿಗಳ ಜೊತೆಗೆ ಭಾನುವಾರ ವಿಡಿಯೊ ಸಂವಾದ ನಡೆಸಿದರು.

ಸಂವಾದದಲ್ಲಿ ಭಾಗವಹಿಸಿದ್ದ ಆದಿಚುಂಚನಗಿರಿ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಅವದೇಶಾನಂದ ಸ್ವಾಮೀಜಿ, ಪರಮಾನಂದ ಸ್ವಾಮೀಜಿ, ಆಚಾರ್ಯ ಕೃಷ್ಣಮಣಿ ಮಹಾರಾಜ್ ಹಾಗೂ ಯೋಗ ಗುರು ಬಾಬಾ ರಾಮ್‍ದೇವ್ ಅವರು ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಕುರಿತು ಆರ್‌ಎಸ್‌ಎಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ಕೊರೊನಾದಿಂದ ಬಿಕ್ಕಟ್ಟಿಗೆ ಸಿಲುಕಿರುವ ದೇಶದ ರೈತ ಸಮುದಾಯದ ಸಮಸ್ಯೆಗಳ ಕುರಿತು ವಿಚಾರ ವಿನಿಮಯ ಮಾಡಲಾಯಿತು. ಉತ್ತಮ ಬೆಳೆ ಬೆಳೆದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗದಿರುವುದು, ಕೀಟ-ರೋಗಗಳ ಕಾಟ, ರೈತರು ಸಾಲದ ಸುಳಿಗೆ ಸಿಲುಕುವುದು, ಬೆಳೆ ನಾಶ ಮಾಡುವ ಅಸಹಾಯಕತೆ ಕುರಿತು ಗಂಭೀರ ಚರ್ಚೆ ನಡೆಸಿದರು.

ADVERTISEMENT

ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಮಾರುಕಟ್ಟೆ ಸುಧಾರಣೆ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕುರಿತು ಮಾತನಾಡಿದರು. ಸೋಂಕು ಹರಡುವಿಕೆ ತಡೆಯುವ ಸವಾಲುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಾಕ್‍ಡೌನ್ ಪರಿಹಾರ ಕ್ರಮಗಳು, ನಿರುದ್ಯೋಗ ನಿವಾರಣೆ ಹಾಗೂ ಆರ್ಥಿಕ ಚೇತರಿಕೆ ಕ್ರಮಗಳ ವಿಶ್ಲೇಷಣೆ ಮಾಡಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಧಾರ್ಮಿಕ ಮತ್ತು ಶೈಕ್ಷಣಿಕ ವಲಯಗಳಲ್ಲಿ ಈಗ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕುರಿತು ಸ್ವಾಮೀಜಿಗಳು ಸಲಹೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.