ADVERTISEMENT

ಮೊಳಕಾಲ್ಮುರು: 10 ಶಾಲೆಗಳಲ್ಲಿ ಶೂನ್ಯ ಶಿಕ್ಷಕರು

ಮುಂದುವರಿದ ಸಮಸ್ಯೆ, ಅತಿಥಿ ಶಿಕ್ಷಕರ ನೇಮಕಕ್ಕೆ ಮನವಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 10 ಜೂನ್ 2019, 20:00 IST
Last Updated 10 ಜೂನ್ 2019, 20:00 IST
ಮೊಳಕಾಲ್ಮುರು ತಾಲ್ಲೂಕಿನ ಉರ್ಥಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊರನೋಟ.
ಮೊಳಕಾಲ್ಮುರು ತಾಲ್ಲೂಕಿನ ಉರ್ಥಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊರನೋಟ.   

ಮೊಳಕಾಲ್ಮುರು: ತಾಲ್ಲೂಕಿನ ಹತ್ತು ಸರ್ಕಾರಿ ಶಾಲೆಗಳಲ್ಲಿ ಒಬ್ಬರೂ ಶಿಕ್ಷಕರಿಲ್ಲ. ಹೀಗಾಗಿ ಈ ಶೈಕ್ಷಣಿಕ ವರ್ಷವೂ ಆಂಧ್ರ ಗಡಿಭಾಗದ ಇಲ್ಲಿ ಸಮಸ್ಯೆ ಮುಂದುವರಿದಿದ್ದು, ನಿಯೋಜಿತ ಶಿಕ್ಷಕರು ಅಲ್ಲಿಗೆ ಹೋಗಿ ಪಾಠ ಮಾಡಿ ಬರುತ್ತಿದ್ದಾರೆ. ಅತಿಥಿ ಶಿಕ್ಷಕರನ್ನಾದರೂ ನೇಮಿಸಿಕೊಳ್ಳಬೇಕು ಎಂಬ ಸೊಲ್ಲು ಪೋಷಕರಿಂದ ಕೇಳಿಬರುತ್ತಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಕೊರತೆಗಳು ಇರುವ ಹಿನ್ನೆಲೆಯಲ್ಲಿ ಶಿಕ್ಷಕರು ಇಲ್ಲಿಗೆ ಬಂದು ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಲವು ವರ್ಷಗಳಿಂದ ಶಿಕ್ಷಕರ ಕೊರತೆ ಇದೆ. ಹೀಗಾಗಿ ಪ್ರಾಥಮಿಕ ಹಂತದಲ್ಲೇ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಪೋಷಕರು ದೂರಿದ್ದಾರೆ.

ತಾಲ್ಲೂಕಿನಲ್ಲಿ 1ರಿಂದ 5ನೇ ತರಗತಿವರೆ 67, 1ರಿಂದ 7ನೇ ತರಗತಿವರೆಗೆ 74 ಹಾಗೂ 10 ಪ್ರೌಢಶಾಲೆಗಳು ಸೇರಿ 151 ಶಾಲೆಗಳಿವೆ. ಪ್ರಾಥಮಿಕ ವಿಭಾಗದಲ್ಲಿ 669 ಮತ್ತು ಪ್ರೌಢಶಾಲೆಗಳಲ್ಲಿ 104 ಶಿಕ್ಷಕ ಮಂಜೂರಾತಿ ಹುದ್ದೆಗಳು ಇವೆ. ಪ್ರಾಥಮಿಕ ವಿಭಾಗದಲ್ಲಿ 525 ಹಾಗೂ ಪ್ರೌಢಶಾಲೆಯಲ್ಲಿ 95 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 153 ಹುದ್ದೆಗಳು ಖಾಲಿ ಇವೆ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸೋಮಶೇಖರ್ ಮಾಹಿತಿ ನೀಡಿದರು.

ADVERTISEMENT

‘ದೇವಸಮುದ್ರ ಹೋಬಳಿಯಲ್ಲಿ ಸಮಸ್ಯೆ ಹೆಚ್ಚಾಗಿದೆ. ಇಲ್ಲಿ ಸಾರಿಗೆ ಸೌಲಭ್ಯ ಕಡಿಮೆ ಇರುವುದು ಶಿಕ್ಷಕರು ಹಿಂದೇಟು ಹಾಕಲು ಒತ್ತು ನೀಡಿದೆ. ಹಳೇಕೆರೆ, ಉರ್ಥಾಳ್, ಕೆಳಗಿನಕಣಿವೆ, ಯರಪೋತ ಜೋಗಿಹಳ್ಳಿ, ಹೊಸಕೋಟೆ, ಜಂಗಲಿ ಸೂರಯ್ಯನಹಟ್ಟಿ, ಶಿರೇಕೊಳ, ಎಸ್. ಹನುಮಾಪುರ, ಮಲ್ಲೇಹರವು ಸೇರಿ 10 ಶೂನ್ಯ ಶಿಕ್ಷಕ ಶಾಲೆಗಳಿವೆ’ ಎಂದರು.

ಸಮಸ್ಯೆ ಇರುವ ಶಾಲೆಗಳಿಗೆ ನಿಯೋಜನೆ ಮೂಲಕ ಪಾಠ ಮಾಡಿಸಲಾಗುತ್ತಿದೆ. ಈಚೆಗೆ ಸರ್ಕಾರ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಇದರಲ್ಲಿ ತಾಲ್ಲೂಕಿಗೆ 150 ಶಿಕ್ಷಕರನ್ನು ನೀಡಲೇಬೇಕು ಎಂದು ಮನವಿ ಮಾಡಲಾಗಿದೆ. ಅಲ್ಲಿವರೆಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.

‘ಅತಿಥಿ ಶಿಕ್ಷಕರನ್ನು ಅರ್ಧ ಶೈಕ್ಷಣಿಕ ವರ್ಷದಲ್ಲಿ ನೀಯೋಜಿಸಬೇಡಿ.ಜೂನ್ ತಿಂಗಳಲ್ಲೇ ನೀಡಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಈ ಮೂಲಕ ಹಿಂದುಳಿಂದ ಮೊಳಕಾಲ್ಮುರು ತಾಲ್ಲೂಕಿನ ನೆರವಿಗೆ ಬರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಶ್ರೀರಾಮುಲು, ಜನಸಂಸ್ಥಾನ ಸಂಸ್ಥೆ ವಿರೂಪಾಕ್ಷಪ್ಪ ಮನವಿ ಮಾಡಿದ್ದಾರೆ.

**

ಈ ಬಗ್ಗೆ ಗಮನಹರಿಸಿ ತಕ್ಷಣವೇ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಲು ಬಿಡುವುದಿಲ್ಲ.
– ಅನಂತ್, ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ

**

ಶಾಲೆ ಹೆಸರು ವಿದ್ಯಾರ್ಥಿ ಸಂಖ್ಯೆ

ಮಲ್ಲೇಹರವಿ 20

ಶಿರೇಕೊಳ 33

ಉರ್ಥಾಳ್ 111

ಕೆಳಗಿನ ಕಣಿವೆ 53

ಎಸ್.ಹನುಮಾಪುರ 40

ಯರಪೋತ ಜೋಗಿಹಳ್ಳಿ 30

ಕಪ್ಪಡ ಬಮಡೇಹಟ್ಟಿ 15

ಹೊಸಕೋಟೆ 48

ಏಣಿಮೇಗಳಹಟ್ಟಿ 20

ಭದ್ರಪ್ಪನ ತೋಪು 05

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.