ADVERTISEMENT

ಕೊಡಗಿನಲ್ಲಿ ಮತ್ತೆ ಪ್ರವಾಹ: ಸೇತುವೆ ಜಲಾವೃತ, ಸಂಪರ್ಕ ಕಡಿತ

ಮನೆಗಳಿಗೆ ನುಗ್ಗಿದ ನೀರು, ನಡುಗಿದ ಚಾಮರಾಜನಗರ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 21:07 IST
Last Updated 29 ಆಗಸ್ಟ್ 2022, 21:07 IST
ಕಗ್ಗಲಿಪುರದ ಬಳಿ ಸೇತುವೆ ಕೊಚ್ಚಿ ಹೋಗಿರುವುದರಿಂದ ಸಂಪರ್ಕವೇ ಕಡಿತಗೊಂಡಿದ್ದು, ಶಾಲಾ ಮಕ್ಕಳು ಕುತೂಹಲದಿಂದ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜೆ. -Photo/ Prashanth HG
ಕಗ್ಗಲಿಪುರದ ಬಳಿ ಸೇತುವೆ ಕೊಚ್ಚಿ ಹೋಗಿರುವುದರಿಂದ ಸಂಪರ್ಕವೇ ಕಡಿತಗೊಂಡಿದ್ದು, ಶಾಲಾ ಮಕ್ಕಳು ಕುತೂಹಲದಿಂದ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜೆ. -Photo/ Prashanth HG   

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಜನ ಜೀವನ ತತ್ತರಗೊಂಡಿದೆ. ಕೆರೆ ಕಟ್ಟೆಗಳು ಕೋಡಿ ಬಿದ್ದು, ಗ್ರಾಮಗಳಿಗೆ ನೀರು ನುಗ್ಗಿತ್ತು. ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು.

ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬೆಳೆ ನಷ್ಟವಾಗಿದೆ‌. ಕೆರೆಕಟ್ಟೆಗಳು ಕೋಡಿ ಬಿದ್ದು, ಚಾಮರಾಜನಗರ–ಸಂತೇಮರಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಸ್ತೆಗಳು, ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಯಳಂದೂರು ತಾಲ್ಲೂಕಿನಲ್ಲಿ ಕಬಿನಿ ನಾಲೆ ಹಾಗೂ ಸುವರ್ಣಾವತಿ ನದಿ ಉಕ್ಕಿ ಹರಿದು ಕಂದಹಳ್ಳಿ, ಕೆಸ್ತೂರು, ಅಂಬಳೆ, ಯರಿಯೂರು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿತ್ತು.

‘ಮೂರ್ನಾಲ್ಕು ದಶಕಗಳ ಅವಧಿಯಲ್ಲಿ ಇಷ್ಟೊಂದು ಮಳೆಯಾಗಿದ್ದನ್ನು ನೋಡಿಲ್ಲ’ ಎಂದು ಚಾಮರಾಜನಗರ ಹಿರಿಯ ನಾಗರಿಬ್ಬರು ಹೇಳಿದ್ದಾರೆ.

ADVERTISEMENT

ಕೊಡಗು ಜಿಲ್ಲೆಯ ಪಯಸ್ವಿನಿ ನದಿ ಉಕ್ಕಿ ಕೊಯನಾಡಿನ ಕಿಂಡಿ ಅಣೆಕಟ್ಟೆಗೆ ಮರದ ದಿಮ್ಮಿಗಳು ಸಿಲುಕಿದ್ದು, ಏಳು ಮನೆಗಳಿಗೆ ನೀರು ನುಗ್ಗಿತ್ತು. ನಾಪೋಕ್ಲು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಸುಳ್ಯ ತಾಲ್ಲೂಕಿನ ಸಂಪಾಜೆ ಪರಿಸರದಲ್ಲಿ ಸೋಮವಾರ ಪ್ರವಾಹ ಕಾಣಿಸಿಕೊಂಡಿದ್ದು, ಭಾರಿ ಹಾನಿ ಸಂಭವಿಸಿದೆ. ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟಿಗೆ ಬೃಹತ್ ಗಾತ್ರದ ಮರದ ದಿಮ್ಮಿಗಳು ಬಂದು ಅಡ್ಡಲಾಗಿ ನಿಂತಿದ್ದು, ಈ ಪರಿಸರದ ಹಲವು ಮನೆಗಳು ಜಲಾವೃತಗೊಂಡಿದೆ. ಚೆಂಬು ಗ್ರಾಮದ ಆನೆಹಳ್ಳ ಎಂಬಲ್ಲಿ ಕಿಂಡಿ ಅಣೆಕಟ್ಟು ನೀರಿನಲ್ಲಿ ಕೊಚ್ಚಿಹೋಗಿದ್ದು, ದಬ್ಬಡ್ಕದಲ್ಲೂ ಗುಡ್ಡ ಕುಸಿದಿದೆ.

ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿಯ ಜಮೀನಿನಲ್ಲಿ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ಜಮೀನಿನ ಮಾಲೀಕ ಹಾಗೂ 28 ಕೂಲಿ ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ರಾಮನಗರ ಹಾಗೂ ಚನ್ನಪಟ್ಟಣ ತಾಲ್ಲೂಕುಗಳಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಆರಂಭಗೊಂಡ ಮಳೆ ಬೆಳಿಗ್ಗೆ 10ರವರೆಗೆ ಸತತವಾಗಿ ಸುರಿಯಿತು. ಇದರಿಂದಾಗಿ ರಾಮನಗರದಲ್ಲಿ ಪ್ರವಾಹದಂತೆ ನೀರು ನುಗ್ಗಿದ್ದು, ಮುಂಜಾನೆ ಪಟ್ಟಣ ಭಾಗಶಃ ಜಲಾವೃತಗೊಂಡಿತ್ತು.

ರಾಮನಗರದ ಗಾಂಧಿನಗರದಲ್ಲಿ ಕೃಷ್ಣ ಹಾಗೂ ಮುದ್ದಲ್ಲಪ್ಪ ಅವರ ಮನೆಯ ಗೋಡೆ ಕುಸಿದು 30ಕ್ಕೂ ಹೆಚ್ಚು ಕುರಿ ಸಾವನ್ನಪ್ಪಿವೆ. ರಾಮನಗರದ ಭಕ್ಷಿಕೆರೆ ಸಮೀಪ ರೈಲು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದರಿಂದಾಗಿ ಬೆಳಿಗ್ಗೆ ಕೆಲ ಹೊತ್ತು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಚನ್ನಮಾನಹಳ್ಳಿ ಕೆರೆ ಕೋಡಿ ಒಡೆದು ಹಳಿಗಳಲ್ಲಿ ನೀರು ನಿಂತಿತ್ತು.

ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ್ದು, ಸಾಕಷ್ಟು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳ ಸಂಪರ್ಕ ಕಡಿತಗೊಂಡಿತ್ತು. ಮಂಗಳವಾರ ಪೇಟೆಯಲ್ಲಿ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೂ ದೇಹ ಪತ್ತೆಯಾಗಿಲ್ಲ.

ಮೂರು ದಿನ ಮಳೆ: ರಾಜ್ಯದಾದ್ಯಂತ ಬಹುತೇಕ ಕಡೆ ಮೂರು ದಿನ ಗುಡುಗು ಸಹಿತ ಭಾರಿ ಮಳೆಯಾಗಲಿದೆ
ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ 15ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.

ನಾಲ್ಕು ಪಟ್ಟು ಹೆಚ್ಚು ಮಳೆ
ರಾಮನಗರದಲ್ಲಿ ಆಗಸ್ಟ್‌ನಲ್ಲಿ ವಾಡಿಕೆಯ ನಾಲ್ಕು ಪಟ್ಟಿಗಿಂತ ಅಧಿಕ ಮಳೆಯಾಗಿರುವುದು ಅನಾಹುತಗಳಿಗೆ ಕಾರಣವಾಗಿದೆ. ಆಗಸ್ಟ್‌ನಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿಸರಾಸರಿ 395 ಮಿ.ಮೀ. (ವಾಡಿಕೆ ಮಳೆ 100 ಮಿ.ಮೀ.) ಹಾಗೂ ರಾಮನಗರದಲ್ಲಿ ಸರಾಸರಿ 418 ಮಿ.ಮೀ. ( ವಾಡಿಕೆ ಮಳೆ111 ಮಿ.ಮೀ) ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ ಚನ್ನಪಟ್ಟಣದಲ್ಲಿ 222 ಮಿ.ಮೀ. ಹಾಗೂ ರಾಮನಗರದಲ್ಲಿ 239 ಮಿ.ಮೀ. ಮಳೆಯಾಗಿದೆ.

ಕೊಚ್ಚಿ ಹೋದ ತೆಂಗಿನಕಾಯಿ
‌ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದ ರೈತ ಚಿದಂಬರ ಅವರಿಗೆ ಸೇರಿದ 4500ಕ್ಕೂ ಹೆಚ್ಚು ತೆಂಗಿನಕಾಯಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. 9000ದಷ್ಟು ತೆಂಗಿನಕಾಯಿಯನ್ನು ಅವರು ಜಮೀನಿನಲ್ಲಿ ರಾಶಿ ಹಾಕಿದ್ದರು. ಮಳೆಯಿಂದಾಗಿ ಹೆಬ್ಬಸೂರಿನ ಹಳ್ಳ ಉಕ್ಕಿ ಹರಿದು ಜಮೀನಿಗೆ ನೀರು ನುಗ್ಗಿ ತೆಂಗಿನಕಾಯಿ ಕೊಚ್ಚಿಕೊಂಡು ಹೋಗಿದೆ.

ಕಾರು ಹರಿದು ಜಿಲ್ಲಾಧಿಕಾರಿಗೆ ತೀವ್ರ ಪೆಟ್ಟು
ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗಾಂಧಿ ಗ್ರಾಮದಲ್ಲಿ ಸಂತ್ರಸ್ತರನ್ನು ಮಾತನಾಡಿಸಿ ವಾಪಸ್‌ ಆಗುವ ವೇಳೆ ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌ ಅವರ ಕಾಲಿನ ಮೇಲೆ ಕಾರು ಹರಿದು ಕಾಲಿನ ಮೂಳೆಗಳು ಮುರಿದಿವೆ.

ತೇಲಿ ಹೋದ ಮೀನುಗಳು
ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಮಧ್ಯರಾತ್ರಿ 1ರವರೆಗೆ ಸುರಿದ ಭಾರಿ ಮಳೆಗೆ ಶೆಟ್ಟಿಕೇರಿ ಗ್ರಾಮದ ಕೆರೆ ತುಂಬಿ ಹರಿದಿದ್ದರಿಂದ, ಕೆರೆಯಲ್ಲಿ ಸಾಕಣೆ ಮಾಡಿದ್ದ ಲಕ್ಷಾಂತರ ಮೀನುಗಳು ತೇಲಿ ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.