ADVERTISEMENT

ಉಕ್ಕಿದ ಮಲಪ್ರಭಾ; 2 ಸೇತುವೆ ಜಲಾವೃತ

ಮೂಡಿಗೆರೆ ತಾಲ್ಲೂಕಿನ ಹಲವು ಭಾಗದಲ್ಲಿ ಹೆಚ್ಚಿದ ವರುಣನ ಆರ್ಭಟ, ಶಿವಮೊ‌ಗ್ಗ ಜಿಲ್ಲೆಯಲ್ಲೂ ಮಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:00 IST
Last Updated 8 ಜುಲೈ 2019, 20:00 IST
ಗೋಕಾಕ ನಗರ ಹೊರವಲಯದ ಶಿಂಗಳಾಪೂರ ಬ್ರಿಡ್ಜ್‌–ಕಮ್‌–ಬಾಂಧಾರ ಸೋಮವಾರ ಬೆಳಗಿನ ಜಾವವೇ ಘಟಪ್ರಭೆಯ ಪ್ರವಾಹದಲ್ಲಿ ಭಾಗಶಃ ಮುಳುಗಿ ಸಂಚಾರಕ್ಕೆ ಅಡೆ–ತಡೆ ಉಂಟಾಗಿದೆ.
ಗೋಕಾಕ ನಗರ ಹೊರವಲಯದ ಶಿಂಗಳಾಪೂರ ಬ್ರಿಡ್ಜ್‌–ಕಮ್‌–ಬಾಂಧಾರ ಸೋಮವಾರ ಬೆಳಗಿನ ಜಾವವೇ ಘಟಪ್ರಭೆಯ ಪ್ರವಾಹದಲ್ಲಿ ಭಾಗಶಃ ಮುಳುಗಿ ಸಂಚಾರಕ್ಕೆ ಅಡೆ–ತಡೆ ಉಂಟಾಗಿದೆ.   

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ತಾಲ್ಲೂಕಿನ ತಿವೋಲಿ ಗ್ರಾಮದ ಸಂಪರ್ಕ ಸೇತುವೆ, ಬೈಲಹೊಂಗಲ ತಾಲ್ಲೂಕಿನ ಬೇವಿನಕೊಪ್ಪ– ಸಂಗೊಳ್ಳಿ ಕಿರು ಸೇತುವೆ ಜಲಾವೃತವಾಗಿವೆ. ಇವುಗಳಿಗೆ ಪರ್ಯಾಯ ರಸ್ತೆಗಳಿದ್ದು, ಓಡಾಟಕ್ಕೆ ತೊಂದರೆಯಾಗಿಲ್ಲ.

ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಖಾನಾಪುರ, ಹುಬ್ಬಳ್ಳಿ, ಧಾರವಾಡ, ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ಅಂಕೋಲಾ ಮತ್ತು ಭಟ್ಕಳ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಉತ್ತಮ ಮಳೆ ಸುರಿಯಿತು. ಮಳೆಗೆ ನದಿ, ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ರಾಜ್ಯಕ್ಕೆ ಹರಿದುಬರುತ್ತಿರುವ ನೀರು: ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದೆ. ಮಹಾಬಳೇಶ್ವರ, ಪಾಟಗಾಂವ, ಕೊಯ್ನಾ, ವಾರಣಾ, ಕಾಳಮ್ಮವಾಡಿ, ರಾಧಾನಗರಿ ಹಾಗೂ ನವಜಾ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಈ ನೀರು ಕೃಷ್ಣಾ ಹಾಗೂ ಉಪನದಿಗಳಾದ ದೂಧ್‌ಗಂಗಾ, ವೇದಗಂಗಾ
ಮೂಲಕ ರಾಜ್ಯಕ್ಕೆ ನೀರು ಹರಿದುಬರುತ್ತಿದೆ. ರಾಜಾಪುರ ಬ್ಯಾರೇಜ್‌ ಮೂಲಕ 59,653 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರುತ್ತಿದೆ.

ADVERTISEMENT

ಮೂರ್ನಾಲ್ಕು ದಿನಗಳ ಹಿಂದೆ ಜಲಾವೃತಗೊಂಡಿದ್ದ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ, ಕಾರದಗಾ– ಭೋಜ, ಭೋಜವಾಡಿ– ಕುನ್ನೂರ, ಸಿದ್ನಾಳ– ಅಕ್ಕೋಳ, ಜತ್ರಾಟ– ಭಿವಶಿ ಹಾಗೂ ಮಲಿಕವಾಡ– ದತ್ತವಾಡ ಸೇತುವೆಗಳು ಯಥಾಸ್ಥಿತಿಯಲ್ಲಿವೆ.

ಖಾನಾಪುರ ಅರಣ್ಯದಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ತಾಲ್ಲೂಕಿನ ಜಾಂಬೋಟಿ ಬಳಿ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ.

ಉತ್ತಮ ಮಳೆ (ಮೂಡಿಗೆರೆ ವರದಿ): ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಸೋಮವಾರವೂ ಮಳೆಯ ಆರ್ಭಟ ಮುಂದುವರೆದಿದ್ದು, ಕೆಲವೆಡೆ ಬಿಟ್ಟು ಬಿಟ್ಟು ಸುರಿದರೆ ಮತ್ತೆ ಕೆಲವು ಪ್ರದೇಶದಲ್ಲಿ ಇಡೀ ದಿನ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.

ಬಣಕಲ್ ಹಾಗೂ ಕೊಟ್ಟಿಗೆಹಾರ ಭಾಗದಲ್ಲಿ ಉತ್ತಮ ಮಳೆ ಆಯಿತು. ಮಳೆಯಿಂದಾಗಿ ಚಾರ್ಮಾಡಿ ಘಾಟಿ ಭಾಗದಲ್ಲಿ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಸೋಮವಾರ ಬಣಕಲ್‍ನ ಮತ್ತಿಕಟ್ಟೆ ರಸ್ತೆಯಲ್ಲಿ ಮರ ಅಡ್ಡಲಾಗಿ ಬಿದ್ದಿದ್ದು, ಮತ್ತಿಕಟ್ಟೆ ಭಾಗದಲ್ಲಿ ವಿದ್ಯುತ್ ಸ್ಥಗಿತವಾಗಿತ್ತು. ರಸ್ತೆ ಸಂಚಾರ ದುಸ್ತರವಾಯಿತು.

ತಾಲ್ಲೂಕಿನ ದೇವರುಂದ, ಹೊಸ್ಕೆರೆ, ಭೈರಾಪುರ, ಮೇಕನಗದ್ದೆ, ಉಗ್ಗೆಹಳ್ಳಿ, ಹೇರಿಕೆ, ಗುತ್ತಿ, ದೇವರಮನೆ ಮುಂತಾದ ಪ್ರದೇಶಗಳಲ್ಲಿ ಮಳೆಯು ಮುಂದುವರಿದಿತ್ತು. ಕೂವೆ, ಗಬ್ಗಲ್, ಹೊಸಂಪುರ, ಕುಂದೂರು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು.

ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆ: ತೀರ್ಥಹಳ್ಳಿ, ಹೊಸನಗರ ತಾಲ್ಲೂಕು ಭಾಗದಲ್ಲಿ ಜೋರು ಮಳೆಯಾಗಿದ್ದು,ಶಿವಮೊಗ್ಗ ನಗರ, ಶಿಕಾರಿಪುರ, ಸಾಗರ, ಸೊರಬ, ಭದ್ರಾವತಿಯಲ್ಲಿ ಸಾಧಾರಣ ಮಳೆಯಾಗಿದೆ.

ಹೊಸನಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಸೋಮವಾರ ಸುರಿದ ಮಳೆಯಿಂದ ವಾಹನ ಸಂಚಾರಕ್ಕೆ ತೊಂದರೆ ಆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.