ADVERTISEMENT

ರಸ್ತೆಗೆ ಕುಸಿದ ಗುಡ್ಡ: ಕೊಡಸಳ್ಳಿ ಅಣೆಕಟ್ಟೆ ಭರ್ತಿ, ಕುಗ್ಗಿದ ಮಳೆ ಅಬ್ಬರ

ಆಲಮಟ್ಟಿಗೆ ಒಂದು ಲಕ್ಷ ಕ್ಯುಸೆಕ್‌ ನೀರು ಒಳಹರಿವು

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 19:45 IST
Last Updated 11 ಜುಲೈ 2019, 19:45 IST
ಕಾರವಾರ ತಾಲ್ಲೂಕಿನ ಕೊಡಸಳ್ಳಿ ಅಣೆಕಟ್ಟೆ ತುಂಬಿದ್ದು, ನಾಲ್ಕು ಕ್ರೆಸ್ಟ್‌ಗೇಟ್‌ಗಳಿಂದ ಗುರುವಾರ ನೀರು ಹೊರಬಿಡಲಾಯಿತು
ಕಾರವಾರ ತಾಲ್ಲೂಕಿನ ಕೊಡಸಳ್ಳಿ ಅಣೆಕಟ್ಟೆ ತುಂಬಿದ್ದು, ನಾಲ್ಕು ಕ್ರೆಸ್ಟ್‌ಗೇಟ್‌ಗಳಿಂದ ಗುರುವಾರ ನೀರು ಹೊರಬಿಡಲಾಯಿತು   

ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು ಒಂದು ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ಇದು ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಅಂಕೋಲಾ ತಾಲ್ಲೂಕು ರಾಮನಗುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಚಲಿಸುತ್ತಿದ್ದಲಾರಿಯ ಮೇಲೆ ಗುಡ್ಡ ಕುಸಿದು, ಲಾರಿ ಪಲ್ಟಿಯಾಗಿ ಸುಮಾರು ಮೂರು ತಾಸು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ಭಾರಿ ಮಳೆಯಿಂದಾಗಿ ಯಲ್ಲಾಪುರದ ಮೊರಾರ್ಜಿ ದೇಸಾಯಿ ಶಾಲೆಯ ಆವರಣ ಗೋಡೆ ಹಾಗೂ ಮುಂಡ
ಗೋಡ ಪಟ್ಟಣದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ.

ADVERTISEMENT
ಅಂಕೋಲಾ ತಾಲ್ಲೂಕಿನ ರಾಮನಗುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಸಿದ ಮಣ್ಣನ್ನು ಗುರುವಾರ ಬೆಳಿಗ್ಗೆ ತೆರವು ಮಾಡಲಾಯಿತು

ಅಣೆಕಟ್ಟೆ ಭರ್ತಿ: ಕಾಳಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಕಾರವಾರ ತಾಲ್ಲೂಕಿನ ಕೊಡಸಳ್ಳಿ ಅಣೆಕಟ್ಟೆಗುರುವಾರ ಬೆಳಿಗ್ಗೆ ಭರ್ತಿಯಾಯಿತು. ಗರಿಷ್ಠ ಮಟ್ಟವಾದ 75.50 ಮೀಟರ್ ನೀರು ಸಂಗ್ರಹವಾದ ಕಾರಣ ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ಕಾಳಿ ನದಿಗೆ ನೀರನ್ನು ಹರಿಸಲಾಯಿತು.

ಮಲಪ್ರಭಾ ಉಗಮ ಸ್ಥಳ ಕಣಕುಂಬಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.

ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಮಳೆ ಮುಂದುವರಿದಿದ್ದು, ಕೃಷ್ಣಾ ಹಾಗೂ ಉಪನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಗುರುವಾರ ಒಂದೇ ದಿನ ಆಲಮಟ್ಟಿಗೆ 9 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಧಾರವಾಡ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮಳೆ ಸ್ವಲ್ಪ ಬಿಡುವು ನೀಡಿದೆ. ಎರಡು ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಆಗಾಗ ಮಳೆ ಸುರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 50 ಮಿ.ಮೀ. ಮಳೆಯಾಗಿದ್ದು, ಸುಳ್ಯ ಮತ್ತು ಮಂಗಳೂರು ತಾಲ್ಲೂಕಿನಲ್ಲಿ ಅಧಿಕ ತಲಾ 63 ಮಿ.ಮೀ. ಮಳೆ ದಾಖಲಾಗಿದೆ. ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿಲ್ಲ.

ಶಿವಮೊಗ್ಗ ಹಾಗೂ ಸುತ್ತಮುತ್ತ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಭದ್ರಾವತಿ, ಸಾಗರದಲ್ಲಿ ಸಾಧಾರಣ ಮಳೆಯಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಕಮಲನಗರ ತಾಲ್ಲೂಕಿನ ಕೆಲವೆಡೆ ಗುರುವಾರ ಉತ್ತಮ ಮಳೆಯಾಯಿತು. ಕಲಬುರ್ಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇತ್ತು.

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಬಿಡುವು ಕೊಟ್ಟು ಮಳೆಯಾಗುತ್ತಿದೆ. ಹೀಗಾಗಿ, ಕಾವೇರಿ ಮತ್ತು ಹಾರಂಗಿ ನದಿಗಳಿಗೆ ಒಳಹರಿವಿನಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

ಕೆಆರ್‌ಎಸ್‌ಗೆ ಗುರುವಾರ ಸಂಜೆಯ ಹೊತ್ತಿಗೆ ಒಳಹರಿವಿನ ಪ್ರಮಾಣ 7,438 ಕ್ಯುಸೆಕ್ ಇದ್ದರೆ, ಹಾರಂಗಿ ಜಲಾಶಯಕ್ಕೆ 1,818 ಕ್ಯುಸೆಕ್‌ ಇತ್ತು. ಈ ಪ್ರಮಾಣ ಬುಧವಾರಕ್ಕೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.