ADVERTISEMENT

ಪ್ರವಾಹ | ಇಕ್ಕಟ್ಟಿಗೆ ಸಿಲುಕಿದ ಸರ್ಕಾರ

ಕೋವಿಡ್ ಪ್ರಸರಣ ನಿಯಂತ್ರಣದಲ್ಲಿ ಅಧಿಕಾರಿ, ಸಿಬ್ಬಂದಿ ಸಕ್ರಿಯ l ಸಂಭಾವ್ಯ ಸಂಕಷ್ಟ ಎದುರಿಸಲು ಸಿದ್ಧತೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 22:46 IST
Last Updated 5 ಆಗಸ್ಟ್ 2020, 22:46 IST
ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯ ಹೆಬ್ಬೊಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿಯುತ್ತಿದೆ
ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯ ಹೆಬ್ಬೊಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿಯುತ್ತಿದೆ   

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ವಿವಿಧ ನದಿಗಳು ಉಕ್ಕಿ ಹರಿಯುತ್ತಿವೆ. ಆದರೆ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹದಿಂದಾಗುವ ಹಾನಿಯನ್ನು ತಡೆಯುವುದು ಅಧಿಕಾರಿಗಳಿಗೆ ಕಷ್ಟಕರವಾಗಿ ಪರಿಣಮಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ಸೇರಿದ್ದರೆ, ಪ್ರವಾಹದಿಂದ ಸಂತ್ರಸ್ತರಾದವರ ಯೋಗಕ್ಷೇಮ ನೋಡಿಕೊಳ್ಳಬೇಕಿದ್ದ ಕಂದಾಯ ಸಚಿವ ಆರ್‌.ಅಶೋಕ ಕೂಡ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕೊಡಗು ಜಿಲ್ಲೆಗಳ ನದಿಗಳಲ್ಲಿ ಪ್ರವಾಹ ಬಂದಿದೆ. ಕೊಡಗಿನಲ್ಲಿ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದ್ದು, ಭೂಕುಸಿತದ ಆತಂಕ ಎದುರಾಗಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಬೆಳೆ ಮತ್ತು ಮನೆಗಳಿಗೂ ಹಾನಿಯಾಗಿದೆ.

ADVERTISEMENT

ಕಳೆದ ವರ್ಷವೂ ಸರಿ ಸುಮಾರು ಇದೇ ಸಮಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ರಾಜ್ಯ ತತ್ತರಿಸಿತ್ತು. ನೂರು ವರ್ಷಗಳಲ್ಲೇ ಅಂತಹ ಪ್ರವಾಹ ಬಂದಿರಲಿಲ್ಲ. ಆಗ ಹಾನಿಗೆ ಒಳಗಾದ ಜನಕ್ಕೆ ಇನ್ನೂ ಪರಿಹಾರ ಒದಗಿಸಲು ಮತ್ತು ಮನೆಗಳನ್ನು ಕಟ್ಟಿಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈಗ ಮತ್ತೆ ಅದೇ ರೀತಿಯಲ್ಲಿ ಮಳೆಯ ಅಬ್ಬರ ಆರಂಭವಾಗಿದ್ದು, ಕೊರೊನಾ ಸೋಂಕು ಪ್ರಸರಣ ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರಣ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಎದುರಿಸಲು ಪೂರ್ಣ ಪ್ರಮಾಣದಲ್ಲಿ ಸಿದ್ಧರಾಗಿಲ್ಲ ಎಂದು ಮೂಲಗಳು ಹೇಳಿವೆ.

ಪ್ರವಾಹ ಪೀಡಿತ ಜಿಲ್ಲೆಗಳೂ ಸೇರಿದಂತೆ ಎಲ್ಲ ಜಿಲ್ಲಾಧಿಕಾರಿಗಳು ಕೋವಿಡ್‌ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲೂ ಪೊಲೀಸರೂ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಕೋವಿಡ್‌ಗೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗಿರುವುದರಿಂದ, ಪ್ರವಾಹ ಸಂತ್ರಸ್ತರತ್ತ ಗಮನಹರಿಸುವುದು ಕಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

‘ತುರ್ತು ಪರಿಹಾರಕ್ಕೆ ₹50 ಕೋಟಿ’

ರಾಜ್ಯದ ಎಲ್ಲೆಡೆ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ತಕ್ಷಣದ ಪರಿಹಾರ ಕಾರ್ಯಕ್ಕೆ ₹50 ಕೋಟಿ ಬಿಡುಗಡೆ ಮಾಡಲು ಸೂಚಿಸಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಆಸ್ಪತ್ರೆಯಿಂದಲೇ ದೂರವಾಣಿ ಮೂಲಕ ಮಾತನಾಡಿದ ಅವರು ಮಳೆ ಮತ್ತು ಪ್ರವಾಹದ ವಿವರಗಳನ್ನು ಪಡೆದುಕೊಂಡರು.

ಮಳೆ ಮತ್ತು ಪ್ರವಾಹದ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ತರಿಸಿಕೊಳ್ಳುವುದೂ ಸೇರಿದಂತೆ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರುವಂತೆಯೂ ವಿಜಯಭಾಸ್ಕರ್ ಅವರಿಗೆ ಯಡಿಯೂರಪ್ಪ ಸೂಚನೆ ನೀಡಿದರು.

ಏಳು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’

ರಾಜ್ಯದಲ್ಲಿ ನೈರುತ್ಯ ಮುಂಗಾರು ಬಿರುಸುಗೊಂಡಿರುವುದರಿಂದ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಆ.6ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗುವ ನಿರೀಕ್ಷೆ ಇರುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಕರಾವಳಿ ಭಾಗದಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 6.1 ಮೀಟರ್ ಗಳಷ್ಟು ಎತ್ತರ ಅಲೆಗಳೂ ಏಳುವ ಸಾಧ್ಯತೆ ಇರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಆ.10ರವರೆಗೆ ವ್ಯಾಪಕ ಮಳೆಯಾಗಲಿದೆ. ಬೆಳಗಾವಿ, ಬೀದರ್, ಹಾವೇರಿ, ಕಲಬುರ್ಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಕೊಟ್ಟಿಗೆಹಾರದಲ್ಲಿ 31 ಸೆಂ.ಮೀ ಮಳೆ: ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಬುಧವಾರ 31 ಸೆಂ.ಮೀ ಗರಿಷ್ಠ ಮಳೆ ದಾಖಲಾಗಿದೆ. ಮಡಿಕೇರಿ 23, ಹೊಸನಗರ 22, ಆಗುಂಬೆ 21, ಭಾಗಮಂಡಲ, ತೀರ್ಥಹಳ್ಳಿ 19, ಕೊಲ್ಲೂರು, ಕನಕಪುರ 18, ಕೊಪ್ಪ 13, ಬೆಳ್ತಂಗಡಿ, ಕಿತ್ತೂರು, ಮೂಡಿಗೆರೆ 12, ಉಪ್ಪಿನಂಗಡಿ 11, ಕಾರವಾರ, ಅಂಕೋಲಾ, ವಿರಾಜಪೇಟೆ 10, ಸೊರಬ 9, ಮೂಡುಬಿದರೆ, ಬಾಳೆಹೊನ್ನೂರು 8, ಬೆಳಗಾವಿ, ಸಾಗರ 7, ಸುಳ್ಯ, ನಿಪ್ಪಾಣಿ, ಧಾರವಾಡ, ಹಾಸನದಲ್ಲಿ ತಲಾ 6 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.