ADVERTISEMENT

ರೈತರಿಗೆ ₹681.90 ಕೋಟಿ ಪರಿಹಾರ ವಿತರಣೆ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 20:38 IST
Last Updated 9 ಡಿಸೆಂಬರ್ 2021, 20:38 IST
   

ಬೆಂಗಳೂರು: ಕಳೆದ ಮೂರು ತಿಂಗಳಲ್ಲಿ ಒಟ್ಟು 10.62 ಲಕ್ಷ ರೈತರಿಗೆ ₹681.90 ಕೋಟಿ ಪರಿಹಾರವನ್ನು ಅವರ ಖಾತೆಗೆ ಪಾವತಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಬೆಳೆ ನಷ್ಟ ಪರಿಹಾರವನ್ನು ಕೋರಿ ಇನ್ನೂ ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದು ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

ತಂತ್ರಾಂಶದ ಮೂಲಕ ಮಾಹಿತಿ ಸಲ್ಲಿಸಿದ ಎರಡು– ಮೂರು ದಿನಗಳಲ್ಲೇ ರೈತರಿಗೆ ಹಣ ಪಾವತಿ ಮಾಡುವ ವ್ಯವಸ್ಥೆ ಇಡೀ ದೇಶದಲ್ಲಿ ಕರ್ನಾಟಕವೇ ಮೊದಲು. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ರೈತರಿಗೆ ಪರಿಹಾರವನ್ನು ವಿತರಿಸಲಾಗಿದೆ. ಇದೊಂದು ದಾಖಲೆ ಎಂದು ಅವರು ಹೇಳಿದರು.

ADVERTISEMENT

ಹಿಂದೆ ಅರ್ಜಿ ಸಲ್ಲಿಸಿದ ಬಳಿಕ ಪರಿಹಾರ ಪಡೆಯಲು ಆರು
ತಿಂಗಳಿಂದ ವರ್ಷ ಬೇಕಾಗುತ್ತಿತ್ತು. ಬುಧವಾರದವರೆಗೆ ಒಟ್ಟು 10,62,237 ರೈತರಿಗೆ ಪರಿಹಾರ ವಿತರಿಸ
ಲಾಗಿದೆ. ಕಳೆದ 21 ದಿನಗಳಲ್ಲಿ ₹551 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಅಶೋಕ ವಿವರಿಸಿದರು.

₹1,281 ಕೋಟಿಗೆ ಮನವಿ: ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಗೆ ಎನ್‌ಡಿಆರ್‌ಎಫ್‌ ಅಡಿ ₹1,281 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ದೆಹಲಿಯಿಂದ ಅಧಿಕಾರಿಗಳ ತಂಡ ಬಂದು ನಷ್ಟದ ಅಂದಾಜು ಮಾಡಬೇಕಾಗಿದೆ.

ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ವಿಡಿಯೋಗಳನ್ನು ಮಾಡಿಡಲಾಗಿದೆ. ಅಧಿಕಾರಿಗಳಿಗೆ ಅದನ್ನು ತೋರಿಸಿ ಬಳಿಕ ಸ್ಥಳ ಪರಿಶೀಲನೆಗೆ ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.