ADVERTISEMENT

ಸಿದ್ದರಾಮಯ್ಯಗೆ ಇಷ್ಟ ಇದೆಯೊ ಇಲ್ಲವೋ, ಬೇರೆಯವರಿಂದ ವ್ಯಕ್ತಿ ಪೂಜೆ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 9:22 IST
Last Updated 13 ಜುಲೈ 2022, 9:22 IST
ಡಿ.ಕೆ.ಸುರೇಶ್
ಡಿ.ಕೆ.ಸುರೇಶ್   

ಬೆಂಗಳೂರು: ‘ಸಿದ್ದರಾಮಯ್ಯ ಅವರಿಗೆ ಇಷ್ಟ ಇದೆಯೊ ಇಲ್ಲವೊ, ಆದರೆ, ಬೇರೆಯವರು ಅವರ ವ್ಯಕ್ತಿ ಪೂಜೆ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಆಗಸ್ಟ್‌ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ‘ಸಿದ್ದರಾಮಯ್ಯ– 75 ಅಮೃತ ಮಹೋತ್ಸವ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮೋತ್ಸವ’ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

‘ಚುನಾವಣಾ ವರ್ಷ ಆಗಿರುವುದರಿಂದ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ, ಅದರಲ್ಲೂ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗದ ರೀತಿಯಲ್ಲಿ ಕಾರ್ಯಕ್ರಮ ನಡೆಯಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವ ಹಾಗೂ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಜೊತೆಯಾಗಿ ಬಿಂಬಿಸುತ್ತಾ ಕಾರ್ಯಕ್ರಮ ಮಾಡುವುದು ಸೂಕ್ತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದ ಸುರೇಶ್‌, ‘ನಮಗೆ ಇಷ್ಟ ಇದೆಯೋ ಇಲ್ಲವೋ ಕಾರ್ಯಕ್ರಮದ ಹೆಸರು ಸಿದ್ದರಾಮೋತ್ಸವ ಎಂದು ಈಗಾಗಲೇ ಪ್ರಚಾರ ಆಗುತ್ತಿದೆ. ಅದನ್ನು ನಿರಾಕರಿಸುವುದರಿಂದ ಯಾವುದೇ ಲಾಭ ಇಲ್ಲ. ಇದನ್ನು ಒಪ್ಪಿಕೊಂಡು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಇದರ ಒಳಗಡೆ ಸೇರಿಸಿಕೊಳ್ಳಬೇಕು’ ಎಂದರು.

‘ನಾಯಕರ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತೇವೆ ಎಂದರೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇದು ಯಾರೋ ಒಬ್ಬರನ್ನು ಬಿಂಬಿಸುವ ಕೆಲಸ ಅಲ್ಲ. ಇದು ಕಾಂಗ್ರೆಸ್ ಪಕ್ಷದ ಭವಿಷ್ಯದ ಪ್ರಶ್ನೆ ಆಗಿರುವುದರಿಂದ ನಾವು ಏನೋ ಬಿಂಬಿಸಲು ಹೋಗುತ್ತಿದ್ದೇವೆ ಅಥವಾ ಯಾವುದೇ ನಾಯಕತ್ವವನ್ನು ಕೊಡುತ್ತೇವೆ ಎಂದು ಅಲ್ಲ’ ಎಂದರು.

‘ಸಿದ್ದರಾಮಯ್ಯ– 75 ಅಮೃತ ಮಹೋತ್ಸವ’ ಕುರಿತು ಆರಂಭದಲ್ಲಿ ಮಾತನಾಡಿದ ಬಿ.ಎಲ್. ಶಂಕರ್, ಸಭೆಗೆ ಡಿ.ಕೆ. ಶಿವಕುಮಾರ್‌ ಗೈರಾಗಿರುವ ಬಗ್ಗೆ ಅನ್ಯತಾ ಭಾವಿಸಬೇಡಿ ಎಂದು ಮನವಿ ಮಾಡಿದರು.

‘ಪೂರ್ವಭಾವಿ ಸಭೆ ಆಗಿರುವುದರಿಂದ ಗೈರಾಗಿದ್ದಾರೆ. ದಾವಣಗೆರೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಭಾಗವಹಿಸುತ್ತಾರೆ. ಸಿದ್ದರಾಮಯ್ಯ ಅವರಿಗೂ ಈ ಸಭೆಗೆ ಬರಬೇಕೋ ಬೇಡವೋ ಎಂಬ ಜಿಜ್ಞಾಸೆ ಇತ್ತು. ಆದರೆ, ಹಲವು‌ ಮುಖಂಡರು ಭಾಗವಹಿಸಿರುವುದರಿಂದ ಅವರೂ ಬಂದಿದ್ದಾರೆ’ ಎಂದರು.

ಸಮಾವೇಶ ನಡೆಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಕುರಿತು ಪ್ರಸ್ತಾಪಿಸಿದ ಶಂಕರ್, ಯಶಸ್ವಿಯಾಗಿ ಸಮಾವೇಶ ನಡೆಸಬೇಕಾದ ಕುರಿತು ಸಭೆಯಲ್ಲಿ ಸಮಾಲೋಚನೆ. ಮುಕ್ತ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದರು.

ಜಿ. ಪರಮೇಶ್ವರ ಮಾತನಾಡಿ, ‘ಸಿದ್ದರಾಮಯ್ಯ ಅವರನ್ನು ಪೂರ್ಣ ಅರ್ಥ ಮಾಡಿಕೊಳ್ಳಲು ನನಗೆ ಆಗಿಲ್ಲ. ಎಂಟು ವರ್ಷ ಒಟ್ಟಿಗೆ ಕೆಲಸ ಮಾಡಿದ್ದೇನೆ. ಆದರೂ ಅವರನ್ನ ಅರ್ಥ ಮಾಡಿಕೊಂಡಿದ್ದು ಕೇವಲ ಶೇ 50ರಷ್ಟು ಮಾತ್ರ‘ ಎಂದರು.

‘ಆದರೆ, ಅವರ ಸಾಮಾಜಿಕ ಬದ್ಧತೆ ಬಗ್ಗೆ ನನಗೆ ಮೆಚ್ಚುಗೆ ಇದೆ. ಕಾಂಗ್ರೆಸ್ ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಕ್ಷದ ಧ್ವಜ ಹಿಡಿಯಲು ಜನ ಇದ್ದಾರೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ಬಗೆಗಿನ ನಮ್ಮ ಬದ್ಧತೆ ತೋರಿಸಬೇಕು. ಯಾವುದೇ ರೀತಿಯ ಅನುಮಾನಕ್ಕೆ ಅವಕಾಶ ಮಾಡಿಕೊಡಬಾರದು‘ ಎಂದರು.

ಸಿದ್ದರಾಮಯ್ಯ ಜೊತೆ ಜಮೀರ್ ಅಹಮ್ಮದ್, ಭೈರತಿ ಸುರೇಶ್ ಸಭೆಗೆ ಬರುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಪರ ಬೆಂಬಲಿಗರು ಘೋಷಣೆ ಕೂಗಿದರು.

ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಭಾಗವಹಿಸಿಲ್ಲ. ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ, ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್, ಸತೀಶ್ ಜಾರಕಿಹೊಳಿ, ಆರ್‌. ಧ್ರುವನಾರಾಯಣ್, ಕೆ.ಎನ್ ರಾಜಣ್ಣ, ಅಮರೇಗೌಡ ಬಯ್ಯಾಪುರ, ಕೆ.ಜೆ. ಜಾರ್ಜ್, ಬಸವರಾಜ್ ರಾಯರೆಡ್ಡಿ, ವೆಂಕಟರಮಣಪ್ಪ, ಯು.ಟಿ. ಖಾದರ್, ಸತೀಶ ಜಾರಕಿಹೊಳಿ, ರಮಾನಾಥ್ ರೈ, ಅಲ್ಲಂ ವೀರಭದ್ರಪ್ಪ, ಕಿಮ್ಮನೆ ರತ್ನಾಕರ್, ಎಚ್‌. ಆಂಜನೇಯ, ಯತೀಂದ್ರ ಸಿದ್ದರಾಮಯ್ಯ ಮುಂತಾದವರು ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ 600ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.