ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಬಸವೇಶ್ವರ ನಗರದಲ್ಲಿ ಪ್ರೀಮಿಯಂ ವಿದೇಶಿ ಬ್ರ್ಯಾಂಡ್‌ಗಳನ್ನೂ ಒಳಗೊಂಡ ‘ಹೈಟೆಕ್’ ಮಳಿಗೆ ತೆರೆದಿದೆ.
ವಿದೇಶಿ ಕಂಪನಿಯ ಮದ್ಯಗಳೂ ಸೇರಿದಂತೆ ಎಲ್ಲ ಬಗೆಯ ಬ್ರ್ಯಾಂಡ್‌ಗಳೂ ಒಂದೇ ಮಳಿಗೆಯಲ್ಲಿ ಗ್ರಾಹಕರಿಗೆ ದೊರೆಯುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ಸ್ಕಾಚ್, ವಿಸ್ಕಿ, ವೊಡ್ಕಾ, ವೈನ್‌ಗಳು, ದೇಶೀಯ ತಯಾರಿಕಾ ಕಂಪನಿಗಳು ಪೂರೈಸುವ ಅಗ್ಗದ ದರದ ತರಹೇವಾರಿ ಮದ್ಯಗಳು, ವಿವಿಧ ಕಂಪನಿಗಳ ಬಿಯರ್‌ಗಳು ಸಿಗುತ್ತವೆ. ಸದಾಕಾಲ ತಂಪಾದ ಬಿಯರ್‌ಗಳು ಗ್ರಾಹಕರಿಗೆ ದೊರೆಯುವಂತೆ ಶೀತಲೀಕರಣ ಘಟಕಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಮಳಿಗೆ ಉದ್ಘಾಟಿಸಿದ ನಂತರ ಮಾತನಾಡಿದ ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ರಾಜ್ಯದಾದ್ಯಂತ ಇಂತಹ ‘ಹೈಟೆಕ್’ ಮಳಿಗೆಗಳನ್ನು ತೆರೆಯುವ ಮೂಲಕ ವಾರ್ಷಿಕ ₹150 ಕೋಟಿಯಿಂದ ₹200 ಕೋಟಿ ಹೆಚ್ಚುವರಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯದ ಎಂಎಸ್‍ಐಎಲ್ ಮಾರಾಟ ಮಳಿಗೆಗಳಲ್ಲಿ ಡಿ.31ರ ಒಂದೇ ದಿನ ₹18.85 ಕೋಟಿ ಮೊತ್ತದ ಮದ್ಯ ಮಾರಾಟವಾಗಿದೆ. 1,031 ಮದ್ಯ ಮಾರಾಟ ಮಳಿಗೆಗಳಿವೆ. 2022ರ ಡಿ.31ರಂದು ₹14.51 ಕೋಟಿ ಮೌಲ್ಯದ ಮಾರಾಟವಾಗಿತ್ತು. ಈ ಬಾರಿ ₹ 4.34 ಕೋಟಿ ಹೆಚ್ಚಳವಾಗಿದೆ ಎಂದರು.
ರಾಯಚೂರಿನ ರೈಲು ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತಿ ಹೆಚ್ಚು ಅಂದರೆ ₹11.66 ಲಕ್ಷ ರೂಪಾಯಿಗಳ ಮದ್ಯ ಮಾರಾಟವಾಗಿದೆ. ಜಿಲ್ಲಾವಾರು ವರ್ಗೀಕರಣದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚು ಮಾರಾಟವಾಗಿದೆ. ಅಂದರೆ ₹1.82 ಕೋಟಿಯ ಮದ್ಯ ಮಾರಾಟವಾಗಿದೆ. ಉಳಿದ ದಿನಗಳಲ್ಲಿ ಸರಾಸರಿ ವಹಿವಾಟು ₹8 ಕೋಟಿಯಷ್ಟು ಇರುತ್ತದೆ ಎಂದು ಹೇಳಿದರು.
ರಾಯಚೂರು ರೈಲು ನಿಲ್ದಾಣದಲ್ಲಿ ಗರಿಷ್ಠ ಮಾರಾಟ ರಾಜ್ಯದಾದ್ಯಂತ ‘ಹೈಟೆಕ್ ಮಳಿಗೆ’ಗಳ ಸ್ಥಾಪನೆ ಒಂದೇ ಮಳಿಗೆಯಲ್ಲಿ ವೈವಿಧ್ಯಮ ಬ್ರ್ಯಾಂಡ್‌ಗಳು ಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.