ಬೆಂಗಳೂರು: ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ (ಎಂಎಸ್‌ಐಎಲ್) ಟೂರ್ಸ್ ಅಂಡ್ ಟ್ರಾವೆಲ್ಸ್ ವಿಭಾಗವು ಸಾರ್ವಜನಿಕರಿಗೆ ಪ್ರವಾಸ ಪ್ಯಾಕೇಜ್ ಸೇವೆಯನ್ನು ಆರಂಭಿಸಿದೆ. ‘ಸಾರ್ವಜನಿಕರಿಗೆ ಉತ್ತಮ, ಗುಣಮಟ್ಟದ ಮತ್ತು ಸುರಕ್ಷಿತ ಪ್ರವಾಸ ಸೇವೆಯನ್ನು ನೀಡುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಖನಿಜ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಖಾಸಗಿ ಕಂಪನಿಗಳು ಹಲವು ಪ್ರವಾಸ ಪ್ಯಾಕೇಜ್‌ಗಳನ್ನು ಒದಗಿಸುತ್ತಿವೆ. ಅದಕ್ಕಿಂತ ಭಿನ್ನವಾದ ಪ್ರವಾಸ ಸೇವೆಯನ್ನು ಎಂಎಸ್‌ಐಎಲ್ ಒದಗಿಸಲಿದೆ’ ಎಂದರು.
ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ‘ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರವಾಸ ಹೋಗುವವರು ಎದುರಿಸುವ ದೊಡ್ಡ ಸಮಸ್ಯೆ ಆಹಾರದ್ದು. ಹೊರ ರಾಜ್ಯಗಳ ಆಹಾರ ಹೊಂದಿಕೆಯಾಗದೆ, ಪ್ರವಾಸವೇ ಹಾಳಾಗುವ ಸ್ಥಿತಿ ಇದೆ. ಈ ಕ್ಷೇತ್ರದಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳು ಇವೆ. ಆದರೆ ಅವು ಯಾವುವೂ ನೀಡದಿರುವ ಸವಲತ್ತುಗಳನ್ನು ನೀಡಿ, ನಾವು ಸೇವೆ ಆರಂಭಿಸುತ್ತಿದ್ದೇವೆ’ ಎಂದರು.
‘ಎಂಎಸ್ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್ ವಿಭಾಗವು ಈ ಮೊದಲು ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಪ್ರವಾಸಗಳನ್ನು ಮಾತ್ರ ನಿರ್ವಹಣೆ ಮಾಡುತ್ತಿತ್ತು. ಅದನ್ನೇ ಸಾರ್ವಜನಿಕರಿಗೂ ವಿಸ್ತರಿಸುವ ಮೂಲಕ ಉತ್ತಮ ಸೇವೆ ನೀಡುವುದರ ಜತೆಗೆ, ಸಂಸ್ಥೆಯ ಆದಾಯ ಹೆಚ್ಚಿಸುವ ಉದ್ದೇಶ ಇದರ ಹಿಂದೆ ಇದೆ’ ಎಂದರು.
‘ಎಂಎಸ್ಐಎಲ್ ಹಲವು ದಶಕಗಳಿಂದ ಚಿಟ್ ಫಂಡ್ ಸೇವೆ ನೀಡುತ್ತಿದ್ದರೂ, ಕೇರಳದ ಮಟ್ಟಕ್ಕೆ ಬೆಳವಣಿಗೆಯಾಗಿಲ್ಲ. ಕೇರಳದಲ್ಲಿ ಸರ್ಕಾರಿ ಸ್ವಾಮ್ಯದ ಚಿಟ್ ಫಂಡ್ ವಹಿವಾಟು ವಾರ್ಷಿಕ ₹35,000 ಕೋಟಿಯಷ್ಟಿದೆ. ಎಂಎಸ್‌ಐಎಲ್ ಚಿಟ್ ಫಂಡ್ ವ್ಯವಹಾರವನ್ನೂ ವಿಸ್ತರಿಸುವ ಉದ್ದೇಶದಿಂದ ಕೇರಳದ ತಜ್ಞರ ನೆರವು ಕೋರಲಾಗಿದೆ’ ಎಂದು ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.
‘ಮುಂದಿನ ಐದು ವರ್ಷಗಳಲ್ಲಿ ಎಂಎಸ್‌ಐಎಲ್ ಚಿಟ್‌ನ ವಾರ್ಷಿಕ ವಹಿವಾಟನ್ನು ₹5,000 ಕೋಟಿ ಮತ್ತು ಹತ್ತು ವರ್ಷಗಳಲ್ಲಿ ₹10,000 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಇಡೀ ವ್ಯವಸ್ಥೆಯನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ನೂತನ ವ್ಯವಸ್ಥೆಯನ್ನು ಮುಖ್ಯಮಂತ್ರಿ ಶೀಘ್ರವೇ ಉದ್ಘಾಟಿಸಲಿದ್ದಾರೆ’ ಎಂದರು.
ಅಡುಗೆ ಮನೆಯೊಂದಿಗೆ ಪಯಣ: ಗುಂಪು ಪ್ರವಾಸಗಳಲ್ಲಿ ರಾಜ್ಯದ ತಿನಿಸು–ಆಹಾರವನ್ನೇ ಒದಗಿಸಲಾಗುತ್ತದೆ. ಇದಕ್ಕಾಗಿ ಬಾಣಸಿಗರ ತಂಡ ಪ್ರವಾಸಿಗಳೊಂದಿಗೆ ಇರಲಿದೆ
ಮನೆಬಾಗಿಲಿನಿಂದ ಮನೆ ಬಾಗಿಲಿಗೆ: ಒಂಟಿ ಪ್ರವಾಸಿಗರು ವೃದ್ಧರು ಮತ್ತು ಹಿರಿಯ ನಾಗರಿಕರನ್ನು ಮನೆಯಿಂದಲೇ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮನೆಗೆ ವಾಪಸ್ ಕರೆತರುವ ಪ್ಯಾಕೇಜ್
ಸಾರ್ವಜನಿಕರಿಗೆ ಇಎಂಐ ಪ್ರವಾಸ: ಪ್ರವಾಸಿ ಪ್ಯಾಕೇಜ್‌ಗಳಿಗೆ ಕೆಲ ತಿಂಗಳ ಕಂತನ್ನು ಕಟ್ಟಿ ನಂತರದಲ್ಲಿ ಪ್ರವಾಸ ಹೋಗುವ ಸವಲತ್ತು. ಲಕ್ಕಿ ಡಿಪ್ ಮೂಲಕ ಕೆಲ ಪ್ರವಾಸಿಗರನ್ನು ಆಯ್ಕೆ ಮಾಡಿ ಅವರ ಬಾಕಿ ಮೊತ್ತವನ್ನು ಮನ್ನಾ ಮಾಡುವ ಯೋಜನೆ
ಸರ್ಕಾರಿ ಉದ್ಯೋಗಿಗಳಿಗೆ ಇಎಂಐ ಸವಲತ್ತು: ಪ್ರವಾಸ ಹೋಗುವ ಸಂದರ್ಭದಲ್ಲಿ ಒಟ್ಟು ವೆಚ್ಚದ ಶೇ 50ರಷ್ಟನ್ನು ಪಾವತಿ ಮಾಡಿಸಿಕೊಂಡು ಬಾಕಿಯನ್ನು ಇಎಂಐ ಮೂಲಕ ಕಟ್ಟಿಸಿಕೊಳ್ಳುವ ಸವಲತ್ತು.
l ತಲಾ ₹20,000 ಶುಲ್ಕದಲ್ಲಿ 15–18 ದಿನಗಳ ಉತ್ತರ ಭಾರತ ಪ್ರವಾಸ ಪ್ಯಾಕೇಜ್. ವಿವಿಧ ಆಯ್ಕೆಗಳು
l ಪ್ರವಾಸದುದ್ದಕ್ಕೂ ಎಂಎಸ್‌ಐಎಲ್ ಸಿಬ್ಬಂದಿ ಪ್ರವಾಸಿಗರ ಜತೆಯಲ್ಲಿ ಇರಲಿದ್ದಾರೆ. 24 ಗಂಟೆಗಳ ಸಹಾಯವಾಣಿ ಸೇವೆ
l ಪ್ರವಾಸದ ಎಲ್ಲ ಸ್ಥಳಗಳಲ್ಲಿ ವೈದ್ಯರ ಸೇವೆ. 50ಕ್ಕಿಂತ ಹೆಚ್ಚು ಜನರಿರುವ ಗುಂಪು ಪ್ರವಾಸದಲ್ಲಿ ವೈದ್ಯರು ಜತೆಯಲ್ಲಿ ಇರಲಿದ್ದಾರೆ
l ಕಾಶಿ, ವಾರಾಣಸಿ, ಅಯೋಧ್ಯೆ, ಕೈಲಾಸ ಪರ್ವತ ಸೇರಿ ಉತ್ತರ ಭಾರತದ ಪ್ರವಾಸ ಪ್ಯಾಕೇಜ್ (ಇದೇ ಸೆಪ್ಟೆಂಬರ್‌ನಲ್ಲಿ ಮೊದಲ ತಂಡ ಪ್ರವಾಸಕ್ಕೆ ಹೋಗಲಿದೆ)
l ದುಬೈ, ಸಿಂಗಪುರ, ವಿಯೆಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್ ಮತ್ತು ಯೂರೋಪಿನ ಹಲವು ದೇಶಗಳಿಗೆ ವಿದೇಶಿ ಪ್ರವಾಸ ಪ್ಯಾಕೇಜ್
‘ರಾಜ್ಯದ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರ ಒತ್ತು ನೀಡುತ್ತಿದೆ. ಇದರಿಂದ ಹಲವು ಕೈಗಾರಿಕೆಗಳು ಉತ್ತಮ ಪ್ರಗತಿ ಸಾಧಿಸಿವೆ. ಕೆಎಸ್‌ಡಿಎಲ್‌ನ ಲಾಭದ ಪ್ರಮಾಣ ಒಂದು ವರ್ಷದಲ್ಲಿ ₹300 ಕೋಟಿಯಿಂದ ₹500+ ಕೋಟಿಗೆ ಏರಿಕೆಯಾಗಿದೆ’ ಎಂದು ಸಚಿವ ಪಾಟೀಲ ಮಾಹಿತಿ ನೀಡಿದರು. ‘ಅದೇ ರೀತಿ ಹುಬ್ಬಳ್ಳಿ ಎನ್‌ಜಿಇಎಫ್ ವಹಿವಾಟು ವಿಸ್ತರಣೆಗಾಗಿ ಬಿಎಚ್‌ಇಎಲ್ ಜತೆಗೆ ಮಾತುಕತೆ ನಡೆಸಲಾಗುತ್ತದೆ. ಮೈಸೂರು ಪೇಂಟ್ಸ್ ಕಂಪನಿಯ ವಹಿವಾಟನ್ನು ಕೈಗಾರಿಕಾ ಪೇಂಟ್ ಮತ್ತು ಗೃಹಬಳಕೆ ಪೇಂಟ್‌ಗಳ ನಿರ್ಮಾಣಕ್ಕೂ ವಿಸ್ತರಿಸುವ ಯೋಜನೆ ಪ್ರಗತಿಯಲ್ಲಿದೆ. ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ಬಳಕೆದಾರ ಸ್ನೇಹಿಯನ್ನಾಗಿ ಪರಿವರ್ತಿಸಿದ ನಂತರ ಹೆಣ್ಣುಮಕ್ಕಳೂ ಮದ್ಯ ಖರೀದಿಗೆ ಬರುತ್ತಿದ್ದಾರೆ. ವಹಿವಾಟು ಏರಿಕೆಯಾಗಿದೆ’ ಎಂದರು. ಎಂಎಸ್ಐಎಲ್ ‘ಲೇಖಕ್ ಎ 4 ಕಾಪಿಯರ್’ ಕಾಗದಗಳ ತಯಾರಿಕೆ ಆರಂಭಿಸಿದ್ದು ಸಚಿವರು ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.