ಶಿವಾನಂದ ಪಾಟೀಲ
ಹುಬ್ಬಳ್ಳಿ:ಹುಬ್ಬಳ್ಳಿ: ‘ಕಬ್ಬು ಬೆಳೆದ ರೈತರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಪಿ) ಮತ್ತು ಕನಿಷ್ಠ ಬೆಂಬಲ(ಎಂಎಸ್‌ಪಿ) ನಿಗದಿ ಪಡಿಸುವುದು ಕೇಂದ್ರ ಸರ್ಕಾರ. ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
‘ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಿದೆ’ ಎನ್ನುವ ಸಚಿವ ಜೋಶಿ ಹೇಳಿಕೆಗೆ ಭಾನುವಾರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷರು ಬಿಜೆಪಿಯವರೇ ಆಗಿದ್ದಾರೆ. ಅವರದ್ದೇ ಪಕ್ಷದ ನಾಯಕರ ಕಾರ್ಖಾನೆಗಳು ಸಹ ಸಾಕಷ್ಟಿವೆ. ಏನೇನು ಸಮಸ್ಯೆಗಳಿವೆ ಎನ್ನುವುದು ಸಂಘಕ್ಕೆ ತಿಳಿದಿದೆ. ಆದರೂ ಏನೂ ಆಗಿಲ್ಲ ಎನ್ನುವ ವರದಿ ನೀಡಲಾಗಿದೆ. ಈ ಕುರಿತು ಸಚಿವ ಜೋಶಿ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.
‘ಒಂದು ಟನ್‌ಗೆ ನಿಗದಿಪಡಿಸಿದ್ದ ಎಫ್‌ಆರ್‌ಪಿಗಿಂತ ರಾಜ್ಯ ಸರ್ಕಾರ ₹200 ಹೆಚ್ಚು ನೀಡಿದೆ. ಕೆಲವೆಡೆ ₹300 ರಿಂದ ₹350ರವರೆಗೂ ನೀಡಿದೆ. ಸಕ್ಕರೆ, ಎಥೆನಾಲ್ ಮಾರಾಟ ಮತ್ತು ನಿಯಂತ್ರಣ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ರಫ್ತು ಮತ್ತು ಆಮದು ಸಹ ಅದರ ವ್ಯಾಪ್ತಿಗೆ ಒಳಪಡುತ್ತದೆ. ತನ್ನಲ್ಲಿ ಸಾಕಷ್ಟು ಗೊಂದಲ ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ’ ಎಂದರು.
‘ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲು ಪ್ರಯತ್ನ ನಡೆಯುತ್ತಿದೆ. ಕನಿಷ್ಠ ಬೆಂಬಲ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಎಲ್ಲವನ್ನೂ ತಂದು ರಾಜ್ಯ ಸರ್ಕಾರದ ಮೇಲೆ ಹಾಕಿದರೆ ಏನು ಮಾಡಬೇಕು? ಪದೇ ಪದೇ ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರವನ್ನೇ ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತ, ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಮುಖ್ಯಮಂತ್ರಿ ಅಧಿಕಾರ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಆಂತರಿಕ ವಿಚಾರವಾಗಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮ. ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಏನು ಚರ್ಚಿಸಿದ್ದಾರೆ ತಿಳಿದಿಲ್ಲ. ಏನೇ ಆದರೂ ನಾವೆಲ್ಲ ಪಕ್ಷದ ಜೊತೆಗೆ ಇರುತ್ತೇವೆ’ ಎಂದು ಸಚಿವ ಶಿವಾನಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.