ADVERTISEMENT

ಮುಡಾ ನಿವೇಶನ ಹಂಚಿಕೆ: ಪಿ.ಎನ್.ದೇಸಾಯಿ ಆಯೋಗದ ಅವಧಿ ಮೇ 31ರವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 10:15 IST
Last Updated 4 ಫೆಬ್ರುವರಿ 2025, 10:15 IST
ಮುಡಾ ಕಚೇರಿ
ಮುಡಾ ಕಚೇರಿ   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) 2006ರಿಂದ 2024ರ ಜುಲೈ 15ರವರೆಗೂ ನಡೆದಿರುವ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮತ್ತು ಬದಲಿ ನಿವೇಶನಗಳ ಹಂಚಿಕೆ ಕುರಿತ ಆರೋಪಗಳ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನೇಮಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗದ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.

ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಿಸುವಂತೆ ಆಯೋಗದ ಕಾರ್ಯದರ್ಶಿ ಜ. 6ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.  

ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ (ಎರಡು ಅವಧಿ), ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್‌, ಸಿದ್ದರಾಮಯ್ಯ (ಎರಡು ಅವಧಿ) ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪ್ರಾಧಿಕಾರದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಗಿದೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದ ಕಾರಣದಿಂದ ವಿಚಾರಣಾ ಆಯೋಗ ನೇಮಿಸಿ ಜುಲೈ 14ರಂದು ಆದೇಶ ಹೊರಡಿಸಲಾಗಿತ್ತು. ಆಯೋಗದ ಕಾರ್ಯವ್ಯಾಪ್ತಿ ಮತ್ತು ಷರತ್ತುಗಳನ್ನು ಸ್ಪಷ್ಟಪಡಿಸಿ ಗೃಹ ಇಲಾಖೆ ಜುಲೈ 33ರಂದು ಅಧಿಸೂಚನೆ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.