ADVERTISEMENT

ಮುಡಾ: ದಿನೇಶ್‌ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ದೂರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:32 IST
Last Updated 20 ನವೆಂಬರ್ 2025, 0:32 IST
   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣದಲ್ಲಿ, ಮುಡಾದ ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಜಾರಿ ನಿರ್ದೇಶನಾಲಯವು (ಇ.ಡಿ), ‘ದಿನೇಶ್‌ ಕುಮಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಅಕ್ರಮವಾಗಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ’ ಎಂದು ವಿವರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ಕಳೆದುಕೊಂಡ ಭೂಮಿಗೆ ಪರಿಹಾರಾತ್ಮಕವಾಗಿ 14 ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದ ತನಿಖೆ ಆರಂಭಿಸಿದ್ದ ಇ.ಡಿಯು, 1,000ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದನ್ನು ಪತ್ತೆ ಮಾಡಿತ್ತು.

ADVERTISEMENT

ದಿನೇಶ್ ಅವರ ಸುಪರ್ದಿಯಲ್ಲೇ ಈ ಅಕ್ರಮಗಳೆಲ್ಲವೂ ನಡೆದಿವೆ. ನಿವೇಶನ ಹಂಚಿಕೆ ಮಾಡಿದ್ದಕ್ಕೆ ಪ್ರತಿಯಾಗಿ ದಿನೇಶ್ ಅವರು ಬಂಗಲೆ, ಕೃಷಿ ಜಮೀನು, ವಾಣಿಜ್ಯ ಸಂಕೀರ್ಣ, ಐಷಾರಾಮಿ ಕಾರುಗಳು ಮತ್ತು ಹಣವನ್ನು ಉಡುಗೊರೆಯಾಗಿ ಪಡೆದಿದ್ದರು. ಆ ಹಣದಿಂದ ಮತ್ತಷ್ಟು ಆಸ್ತಿಗಳನ್ನು ಖರೀದಿಸಿದ್ದರು ಎಂದು ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿಯು ಈವರೆಗೆ 252 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹400 ಕೋಟಿಯಷ್ಟಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.