– ಪ್ರಜಾವಾಣಿ ಚಿತ್ರ
ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಧಿ ಲೂಟಿ ಮತ್ತು ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೊಯಾ ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಸೋಮವಾರ ಕಾಂಗ್ರೆಸ್ ವಿರುದ್ಧ ಟೀಕಾಪ್ರಕಾರ ನಡೆಸಿದ ಅವರು, ‘ಆರ್‌ಟಿಐ ಕಾಯ್ದೆ ತರಲು ಸೋನಿಯಾ ಗಾಂಧಿ ಕಾರಣಕರ್ತರು. ಆದರೆ, ಮುಡಾ ಹಗರಣ ಬೆಳಕಿಗೆ ತಂದ ಆರ್‌ಟಿಐ ಕಾರ್ಯಕರ್ತರನ್ನೇ ಕಾಂಗ್ರೆಸ್ ಸರ್ಕಾರ ಬಂಧಿಸಿದೆ’ ಎಂದರು.
ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತವರು ರಾಜ್ಯ ಕರ್ನಾಟಕದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದ್ದರೂ ಮೌನವಾಗಿದ್ದಾರೆ. ಇದನ್ನು ನೋಡಿದರೆ ಬೇಸರವಾಗುತ್ತದೆ. ಖರ್ಗೆ ಅವರು ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಕಲ್ಯಾಣಕ್ಕಾಗಿ ಉದ್ದೇಶಿಸಲಾದ ₹187 ಕೋಟಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಚುನಾವಣೆಗೆ ಈ ಹಣ ಬಳಸಿಕೊಳ್ಳಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿದರೆ ಈ ಅಕ್ರಮ ವರ್ಗಾವಣೆಗಳ ನಿಜವಾದ ವ್ಯಾಪ್ತಿ ಬಹಿರಂಗವಾಗಲಿದೆ. ಒಂದು ವೇಳೆ ಸದನದಲ್ಲಿ ತಾವು ಹೇಳಿದ ವಿಷಯಗಳು ಸುಳ್ಳು ಎನ್ನುವುದು ಸಾಬೀತಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಅವರು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.