ADVERTISEMENT

ಮುಧೋಳ ಬಂದ್‌ಗೆ ವ್ಯಾಪಕ ಬೆಂಬಲ, ವಾಹನ ಸಂಚಾರ ಸಂಪೂರ್ಣ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 8:50 IST
Last Updated 16 ನವೆಂಬರ್ 2018, 8:50 IST
   

ಬಾಗಲಕೋಟೆ: ಸರ್ಕಾರ ನಿಗದಿಗೊಳಿಸಿದ ಎಫ್‌ಆರ್‌ಪಿಗಿಂತ (ನ್ಯಾಯಯುತ ಹಾಗೂ ಲಾಭದಾಯಕ ಬೆಲೆ) ಹೆಚ್ಚಿನ ದರ ಈ ಹಂಗಾಮಿನಲ್ಲಿ ಘೋಷಿಸುವಂತೆ ಹಾಗೂ 2017-18ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಹೆಚ್ಚುವರಿ ದರವನ್ನು ಕೊಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರು ನೀಡಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇಂದು ಬೆಳಿಗ್ಗೆಯಿಂದಲ್ಲೇ ನಗರದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.

ಪ್ರತಿಭಟನಾಕಾರರು ಬೆಳಗಾವಿ- ವಿಜಯಪುರ, ಬೆಳಗಾವಿ- ರಾಯಚೂರು, ಜಮಖಂಡಿ-ಮುಧೋಳ,ಮಹಾಲಿಂಗಪುರ ರಸ್ತೆಗಳಲ್ಲಿ ವಾಹನಗಳನ್ನು ತಡೆದು,ಬಂದ್ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಸಂಪರ್ಕ ರಸ್ತೆಗಳನ್ನು ತಡೆದಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.

ADVERTISEMENT

ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೇಡಿಕೆ ಈಡೇರುವವರೆಗೂ ಕಬ್ಬು ನುರಿಸುವಂತಿಲ್ಲ ಎಂದು ಸಕ್ಕರೆ ಕಾರ್ಖಾನೆಗಳಿಗೆ ಪ್ರತಿಭಟನಾನಿರತರು ಎಚ್ಚರಿಕೆ ನೀಡಿರುವ ಕಾರಣ ಜಿಲ್ಲೆಯ 11 ಸಕ್ಕರೆ ಕಾರ್ಖಾನೆಗಳನ್ನು ಮಾಲೀಕರು ಬಂದ್ ಮಾಡಿದ್ದಾರೆ.

ಪ್ರಧಾನಿಗೆ ಪತ್ರ
ಮುಧೋಳದ ಸಕ್ಕರೆ ಕಾರ್ಖಾನೆಗಳು ರೈತರಿಗೆ ತೂಕ ಹಾಗೂ ಕಬ್ಬಿನಲ್ಲಿನ ಸಕ್ಕರೆ ಅಂಶದ (ರಿಕವರಿ) ನಿಗದಿ ವಿಚಾರದಲ್ಲಿ ಮೋಸ ಮಾಡುತ್ತಿವೆ ಎಂದು ಆರೋಪಿಸಿ ಅಲ್ಲಿನ ರೈತ ಹಿತ ರಕ್ಷಣಾ ಸಮಿತಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಕಾರ್ಖಾನೆ ಮಾಲೀಕರು ಕಬ್ಬಿನ ತೂಕ ಮತ್ತು ರಿಕವರಿ ಎರಡೂ ವಿಚಾರದಲ್ಲೂ ರೈತರ ಜೊತೆಗೆ ಸರ್ಕಾರಕ್ಕೂ ವಂಚನೆ ಮಾಡುತ್ತಿದ್ದಾರೆ ಈ ವಿಚಾರದಲ್ಲಿ ಜಿಲ್ಲಾಡಳಿತ ಕೂಡ ಅವರೊಂದಿಗೆ ಕೈಜೋಡಿಸಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.