ADVERTISEMENT

ಕನ್ನಡ ಬಳಸದ ಕಚೇರಿಗಳಿಗೆ ಮಸಿ ಬಳಿಯಬೇಕಾಗುತ್ತದೆ: ‘ಮುಖ್ಯಮಂತ್ರಿ’ ಚಂದ್ರು ಕಿಡಿ

ಕೇಂದ್ರ ಸರ್ಕಾರದ ಧೋರಣೆಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 16:03 IST
Last Updated 31 ಜನವರಿ 2021, 16:03 IST
‘ಮುಖ್ಯಮಂತ್ರಿ’ ಚಂದ್ರು
‘ಮುಖ್ಯಮಂತ್ರಿ’ ಚಂದ್ರು   

ಬೆಂಗಳೂರು: ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಲ್ಲ ಎಂದಿರುವ ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಕನ್ನಡ ನಾಡು ನುಡಿ ಗಡಿ ಜಾಗೃತಿ ಸಮಿತಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಕಿಡಿಕಾರಿದ್ದಾರೆ. ಕನ್ನಡ ಬಳಸದ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಮಸಿ ಬಳಿಯಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.

‘ತ್ರಿಭಾಷಾ ಸೂತ್ರ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅನ್ವಯವಾಗದು ಎಂಬ ಕೇಂದ್ರದ ಧೋರಣೆ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು. ರಾಜ್ಯವು ಇನ್ನು ಕೂಡಾ ತ್ರಿಭಾಷಾ ಸೂತ್ರಕ್ಕೆ ಅಂಟಿಕೊಳ್ಳಬೇಕೇ ಎಂಬ ಬಗ್ಗೆ ಪುನರವಲೋಕನ ನಡೆಸಬೇಕು. ಅಗತ್ಯಬಿದ್ದರೆ ತಮಿಳುನಾಡಿನ ರೀತಿ ನೆಲದ ಭಾಷೆ ಮತ್ತು ಇಂಗ್ಲಿಷ್‌ ಮಾತ್ರ ಬಳಸುವ ಬಗ್ಗೆ ಉಭಯ ಸದನಗಳಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಕಚೇರಿಗಳಲ್ಲಿ ಕನ್ನಡ ಬಳಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಆಡಳಿತದಲ್ಲಿ ಕನ್ನಡ ಕಡೆಗಣನೆ ಬಗ್ಗೆ ಹಾಗೂ ಇದರಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯದ ಎಲ್ಲ ಸಂಸದರೂ ಸಂಸತ್ತಿನಲ್ಲಿ ಒಕ್ಕೊರಲಿನಿಂದ ಧ್ವನಿ ಎತ್ತಬೇಕು ಎಂದರು.

ADVERTISEMENT

‘ಕನ್ನಡದ ಕಡೆಗಣನೆ ಮುಂದುವರಿದರೆ ಜನ ಬೀದಿಗಿಳಿದು ಆಂದೋಲನ ನಡೆಸಬೇಕಾಗುತ್ತದೆ. ಕೇಂದ್ರವು ಹಿಂದಿ ಹೇರಿಕೆಯ ಉದ್ಧಟತನವನ್ನು ಮುಂದುವರಿಸಿದರೆ ಕನ್ನಡಿಗರು ನಮ್ಮ ದೇಶವೇ ಬೇರೆ ಎಂದು ಹೇಳುವಂತಹ ಸ್ಥಿತಿ ನಿರ್ಮಾಣವಾಗಬಹುದು. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.