ADVERTISEMENT

ವಿದ್ಯುತ್ ಬಿಲ್‌ ಪಾವತಿ ಅವಧಿ ಇಳಿಸಿ: ಮುರುಗೇಶ ನಿರಾಣಿ

ಸಕ್ಕರೆ ಕಾರ್ಖಾನೆಗಳಿಂದ ಇಂಧನ ಇಲಾಖೆ ವಿದ್ಯುತ್ ಖರೀದಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 16:09 IST
Last Updated 24 ಜನವರಿ 2025, 16:09 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಂಗಳೂರು: ‘ಸಕ್ಕರೆ ಕಾರ್ಖಾನೆಗಳಿಂದ ರಾಜ್ಯದ ಇಂಧನ ಇಲಾಖೆಯು ಖರೀದಿಸುತ್ತಿರುವ ವಿದ್ಯುತ್‌ ಮೇಲಿನ ಶುಲ್ಕ ಪಾವತಿ ಅವಧಿಯನ್ನು 6 ತಿಂಗಳಿಂದ 15–30 ದಿನಗಳಿಗೆ ಇಳಿಕೆ ಮಾಡಬೇಕು’ ಎಂದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷ ಮುರುಗೇಶ ನಿರಾಣಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯ ಸರ್ಕಾರವೂ ಒಂದು ಹೆಜ್ಜೆ ಮುಂದೆ ಬಂದು ಇರುವ ತೊಡಕುಗಳನ್ನು ನಿವಾರಿಸಬೇಕು’ ಎಂದರು.

‘ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರವು ಅನುಮತಿ ಕೊಟ್ಟ ನಂತರ ಸಕ್ಕರೆ ಬೆಲೆ ತುಸು ಸುಧಾರಿಸಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ತ್ವರಿತವಾಗಿ ಬಾಕಿ ಪಾವತಿ ಮಾಡಲು ಸಾಧ್ಯವಾಗುತ್ತಿದೆ. ಜತೆಗೆ ಸಕ್ಕರೆ ಕಾರ್ಖಾನೆ ಮಾಲೀಕರೂ ಬಡ್ಡಿ ಮತ್ತು ಸಾಲ ಪಾವತಿಸಲು ಅನುಕೂಲವಾಗುತ್ತಿದೆ’ ಎಂದರು.

ADVERTISEMENT

‘ಸಕ್ಕರೆ ಕಾರ್ಖಾನೆ ಮಾಲೀಕರು ಬೇಡಿಕೆ ಸಲ್ಲಿಸಿದ ಕಾರಣಕ್ಕೆ ಎಥೆನಾಲ್‌ ಪೂರೈಕೆಗೆ ತೈಲ ಸಂಸ್ಕರಣ ಕಂಪನಿಗಳು ಬಿಲ್‌ ಪಾವತಿಗೆ ಇದ್ದ 20 ದಿನಗಳ ಅವಧಿಯನ್ನು 10 ದಿನಕ್ಕೆ ಇಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಸ್ತಾವ ಸಲ್ಲಿಸಿದ್ದಾರೆ. ಅದು ಜಾರಿಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದರು.

‘ಸಕ್ಕರೆ ಕಾರ್ಖಾನೆಗಳು ತ್ಯಾಜ್ಯದಿಂದ ಉತ್ಪಾದಿಸಿದ ವಿದ್ಯುತ್ ಅನ್ನು ರಾಜ್ಯದ ಇಂಧನ ಇಲಾಖೆಯು ಖರೀದಿಸುತ್ತಿದೆ. ಆದರೆ ಖರೀದಿಸಿದ ಆರು ತಿಂಗಳ ನಂತರ ಬಿಲ್‌ ಪಾವತಿಗೆ ಅವಕಾಶವಿದೆ. ಪರಿಣಾಮವಾಗಿ ಸಕ್ಕರೆ ಕಾರ್ಖಾನೆ ಮಾಲೀಕರ ಹೊರೆ ಹೆಚ್ಚಾಗುತ್ತಿದೆ. ಆದಾಯವೆಲ್ಲಾ ಸಾಲದ ಮೇಲಿನ ಬಡ್ಡಿಗೆ ಹೋಗುತ್ತದೆ. ಹೀಗಾಗಿ ಬಿಲ್ ಪಾವತಿ ಅವಧಿಯನ್ನು 15ರಿಂದ 30 ದಿನಗಳಿಗೆ ಇಳಿಸಬೇಕು’ ಎಂದರು.

‘ವಿದ್ಯುತ್ ಖರೀದಿ ಸಂಬಂದ ಇಂಧನ ಇಲಾಖೆಯು ಸಕ್ಕರೆ ಕಾರ್ಖಾನೆಗಳ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಈಗ ಶೇ 90ರಷ್ಟು ಕಾರ್ಖಾನೆಗಳ ಒಪ್ಪಂದದ ಅವಧಿ ಮುಗಿದಿದೆ. ಆದರೆ ರಾಜ್ಯ ಸರ್ಕಾರ ಒಪ್ಪಂದವನ್ನು ನವೀಕರಿಸುತ್ತಿಲ್ಲ. ಮಾರಾಟವಾದ ವಿದ್ಯುತ್‌ನ ಹಣದಲ್ಲಿ ಶೇ 70ರಷ್ಟು ರೈತರಿಗೆ ಹೋಗುತ್ತಿದೆ. ಒಪ್ಪಂದ ನವೀಕರಿಸದಿದ್ದರೆ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೂ ನಷ್ಟವಾಗುತ್ತದೆ’ ಎಂದರು.

ಅಕ್ಕಿ ಜೋಳದಿಂದ 402 ಕೋಟಿ ಲೀಟರ್ ಎಥೆನಾಲ್‌

‘ಈ ಆರ್ಥಿಕ ವರ್ಷದಲ್ಲಿ ದೇಶದಾದ್ಯಂತ ಎಲ್ಲ ಸಕ್ಕರೆ ಕಾರ್ಖಾನೆಗಳು 672 ಕೋಟಿ ಲೀಟರ್‌ ಎಥೆನಾಲ್‌ ಉತ್ಪಾದಿಸಿವೆ. ಇದರಲ್ಲಿ ಶೇ 40ರಷ್ಟು ಕಬ್ಬಿನಿಂದ ಉತ್ಪಾದಿಸಿದ್ದರೆ ಶೇ 60ರಷ್ಟು ಅಕ್ಕಿ ಮತ್ತು ಜೋಳದಿಂದ ಉತ್ಪಾದಿಸಲಾಗಿದೆ’ ಎಂದು ಮುರುಗೇಶ ನಿರಾಣಿ ಮಾಹಿತಿ ನೀಡಿದರು.

‘ಅಕ್ಕಿ ಮತ್ತು ಜೋಳದಿಂದ 400 ಕೋಟಿ ಲೀಟರ್‌ ಮತ್ತು ಕಬ್ಬಿನ ಮೂಲದಿಂದ 272 ಕೋಟಿ ಲೀಟರ್‌ ಎಥೆನಾಲ್‌ ಉತ್ಪಾದಿಸಲಾಗಿದೆ. ಪೆಟ್ರೋಲ್‌ ಮಿಶ್ರಣಕ್ಕೆ ಎಥೆನಾಲ್‌ ಬಳಸುತ್ತಿರುವುದರಿಂದ ಆದಾಯ ಸುಧಾರಿಸಿದೆ. ಎಥೆನಾಲ್‌ ಖರೀದಿ ದರ ಏರಿಕೆಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಸ್ತಾವ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಥೆನಾಲ್‌ ಉತ್ಪಾದನೆ ಸಹ ಏರಿಕೆ ಆಗಲಿದೆ’ ಎಂದರು.

‘ಎಥೆನಾಲ್‌ ಆದಾಯದಲ್ಲಿ ರೈತರ ಪಾಲು ಹಂಚಿಕೆಯಲ್ಲಿ ವಂಚನೆಯಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.