ADVERTISEMENT

ಆರೋಪಿಸಿದವರು ಮೈಸೂರಿಗರ ಕ್ಷಮೆ ಕೇಳಲಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:31 IST
Last Updated 14 ಮೇ 2021, 19:31 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಮೈಸೂರು: ‘ಆಮ್ಲಜನಕ ಪೂರೈಕೆ ವಿಚಾರವಾಗಿ, ಮೈಸೂರಿನ ಮೇಲೆ ಕಳಂಕ ಹೊರಿಸಲು ಮುಂದಾದ ಎಲ್ಲರೂ ಮೈಸೂರಿಗರ ಕ್ಷಮೆ ಕೇಳಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶುಕ್ರವಾರ ಇಲ್ಲಿ ಆಗ್ರಹಿಸಿದರು.

‘ನಮ್ಮ ಮೇಲೆ ಆರೋಪ ಮಾಡಲು ಹೋಗಿ, ಮೈಸೂರಿಗೆ ಕಳಂಕ ತರುವ ಪ್ರಯತ್ನ ನಡೆದಿತ್ತು. ಇದೀಗ ಅದರಿಂದ ಹೊರಗೆ ಬಂದಿದ್ದೇವೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಚಾಮರಾಜನಗರದ ದುರಂತ ಕುರಿತಂತೆ ಹೈಕೋರ್ಟ್‌ ಸಮಿತಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ವಿರುದ್ಧ ಮಾಡಿದ ಆರೋಪಗಳು ಆಧಾರ ರಹಿತ. ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಸರ್ಕಾರಕ್ಕೆ ವರದಿ ಕೊಡುತ್ತೇವೆ’ ಎಂದರು. ‘ಮೈಸೂರಿಗೆ ಬಂದ ಏಳು ತಿಂಗಳಿಂದ ವೈಯಕ್ತಿಕವಾಗಿ ಆರೋಪ ಕೇಳುತ್ತಿರುವೆ. ಸೇವೆಗೆ ಸೇರಿದ್ದೇ ದೇಶ ಸೇವೆಗೆ. ಇಂತಹ ಸಣ್ಣಪುಟ್ಟ ಆರೋಪಗಳಿಗೆ ಕಾಲವೇ ಉತ್ತರ ನೀಡಲಿದೆ’ ಎಂದು ತಿಳಿಸಿದರು.

ADVERTISEMENT

‘ಮಾಧ್ಯಮದವರೂ ಸಣ್ಣ ವಿಷಯಕ್ಕೂ ಪ್ರತಿಕ್ರಿಯೆ ಕೇಳೋದು ಸರಿಯಲ್ಲ. ಎಲ್ಲದಕ್ಕೂ ಉತ್ತರ ಕೊಡುತ್ತ ಕೂರಲು ಆಗಲ್ಲ. ಸಾಂಕ್ರಾಮಿಕ ಪಿಡುಗಿನ ಸಮಯವಿದು. ಜನರ ಜೀವ ರಕ್ಷಿಸಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಕಾಲವಿದು’ ಎಂದ ಅವರು, ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ, ಜಿಮ್‌ ನಿರ್ಮಾಣಕ್ಕೆ ಸಂಬಂಧಿತ ಆರೋಪಕ್ಕೆ ತಿರುಗೇಟು ನೀಡಿದರು.

‘ಇಂದು ಬಸವ ಜಯಂತಿ. ಬಸವಣ್ಣನವರ ‘ಕಳಬೇಡ, ಕೊಲಬೇಡ’ ವಚನ ಎಲ್ಲರಿಗೂ ಮಾರ್ಗಸೂಚಿಯಾಗಬೇಕು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸದ್ಬುದ್ಧಿ ಕೊಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.