ADVERTISEMENT

ಮೈಸೂರು: ಭೂಮಿ ಮೌಲ್ಯವೇ ಆಧಾರ, ತೆರಿಗೆ ವಸೂಲಿಯ ಹೊಸ ಕತ್ತಿ

ಶೇ 40ರಷ್ಟು ಪ್ರಮಾಣದವರೆಗೂ ಏರಿಕೆ

ಮಹಮ್ಮದ್ ನೂಮಾನ್
Published 31 ಆಗಸ್ಟ್ 2021, 22:19 IST
Last Updated 31 ಆಗಸ್ಟ್ 2021, 22:19 IST
ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ   

ಮೈಸೂರು: ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡು ಜನರು ಜೀವನ ಸಾಗಿಸಲು ಪರದಾಡುತ್ತಲೇ ಇದ್ದರೆ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ತನ್ನ ಆದಾಯ ಹೆಚ್ಚಿಸಿಕೊಳ್ಳುವ ‘ಸಾಹಸ’ವನ್ನು ಸರ್ಕಾರಿ ಸಂಸ್ಥೆಗಳು ಮಾಡುತ್ತಿವೆ.

ಇಲ್ಲಿಯವರೆಗೆ ವಾರ್ಷಿಕ ಇಂತಿಷ್ಟು ಪ್ರಮಾಣದಲ್ಲಿ ಎಂಬ ಲೆಕ್ಕಾಚಾರದಲ್ಲಿ ಹೆಚ್ಚಳ ಮಾಡಲಾಗುತ್ತಿತ್ತು. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ, ಒಂದೇ ನಗರದ ವ್ಯಾಪ್ತಿಯೊಳಗೆ ಭೂಮಿಯ ಮಾರ್ಗಸೂಚಿ ದರ ಆಧರಿಸಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರುವ ನಗರ ಸ್ಥಳೀಯ ಸಂಸ್ಥೆಗಳು, ತಮ್ಮ ಬೊಕ್ಕಸ ತುಂಬಿಸಿಕೊಳ್ಳುವ ಹೊಸ ಮಾರ್ಗ ಹಿಡಿದಿರುವುದು ಕೋವಿಡ್ ಕಾಲದ ಹೊಸ ಬೆಳವಣಿಗೆ.

ಮೈಸೂರಿನ ರಾಮಾನುಜ ರಸ್ತೆಯಲ್ಲಿ 15X40 ನಿವೇಶನದಲ್ಲಿ ಎರಡು ಮಹಡಿಗಳ ಕಟ್ಟಡ ಹೊಂದಿರುವ ಮಾಲೀಕರು 2018–19 ರಲ್ಲಿ ₹9,197 ಆಸ್ತಿ ತೆರಿಗೆ ಪಾವತಿಸಿದ್ದರೆ, 2019–20 ರಲ್ಲಿ 9,471 ಹಾಗೂ 2021–22ರ ಸಾಲಿನಲ್ಲಿ ₹9,915 ಪಾವತಿಸಿದ್ದಾರೆ.

ADVERTISEMENT

ಅಗ್ರಹಾರದಲ್ಲಿ 30X40 ನಿವೇಶನದಲ್ಲಿ ಮನೆ ಹೊಂದಿರುವ ಮಾಲೀಕರು ಕಳೆದ ವರ್ಷ ₹3,056 ಪಾವತಿಸಿದ್ದರೆ, ಈ ಸಾಲಿನಲ್ಲಿ ₹3,495 ತೆರಿಗೆ ಕಟ್ಟಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಸ್ಯಾಂಪಲ್‌ ಇದು. ತೆರಿಗೆ ಹೆಚ್ಚಳ ಮೈಸೂರು ಪಾಲಿಕೆಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ವಿವಿಧ ಪಾಲಿಕೆ, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲೂ ತೆರಿಗೆ ಭಾರ ಏರುತ್ತಲೇ ಇದೆ.

ಖಾಲಿ ಭೂಮಿಗೂ ತೆರಿಗೆ: ಸರ್ಕಾರದ ಆಸ್ತಿ ತೆರಿಗೆ ಪರಿಷ್ಕರಣೆಯಂತೆ ಕಟ್ಟಡಕ್ಕೆ ಹೊಂದಿಕೊಂಡಿರುವ ಖಾಲಿ
ಭೂಮಿಗೂ ಆಸ್ತಿ ತೆರಿಗೆ ವಿಧಿಸಲಾಗುತ್ತದೆ. 1 ಸಾವಿರ ಚದರ ಅಡಿವರೆಗಿನ ಖಾಲಿ ಜಾಗಕ್ಕೆ ವಿನಾಯಿತಿ ನೀಡಿ, ಅದಕ್ಕಿಂತ ಹೆಚ್ಚು ಇರುವ ಭೂಮಿಗೆ ತೆರಿಗೆ ಪಾವತಿಸಬೇಕು.

ಮೈಸೂರಿನಲ್ಲಿ 25 ರಿಂದ 30 ವರ್ಷಗಳಿಗಿಂತ ಹಿಂದೆ ಕಟ್ಟಿದ್ದ ಬಹುತೇಕ ಮನೆಗಳ ಸುತ್ತಲೂ ಖಾಲಿ ಜಾಗ ಬಿಡಲಾಗಿದೆ. ಉತ್ತಮ ಗಾಳಿ, ಬೆಳಕು ಬರಲಿ ಎಂದು ಮನೆಯ ಸುತ್ತ ಖಾಲಿ ಜಾಗ ಬಿಟ್ಟಿದ್ದವರು ಇದೀಗ ಹೆಚ್ಚುವರಿ ತೆರಿಗೆ ಪಾವತಿಸಬೇಕಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ 2018–19ರಿಂದ 2020–21ರವರೆಗೂ ತೆರಿಗೆಯಲ್ಲಿ ಸ್ಥಿರತೆ ಕಂಡುಬಂದಿದೆ. 2021–22ನೇ ಸಾಲಿನಲ್ಲಿ ಮಹಾನಗರದ ಆಯಾ ಪ್ರದೇಶದ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಶೇ 25–40ರಷ್ಟು ಹೆಚ್ಚು ತೆರಿಗೆ ವಸೂಲಿ ಮಾಡಿದೆ.

ತೆರಿಗೆ ಹೆಚ್ಚಿಸಿ, ವಾಪಸ್‌ ಪಡೆದ ಪಾಲಿಕೆ: ಕಲಬುರ್ಗಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ಆಸ್ತಿಗಳ ತೆರಿಗೆ ಪರಿಷ್ಕರಿಸಿ, ಶೇ 15 ರಷ್ಟು ಹೆಚ್ಚಳ ಮಾಡಿ ಏಪ್ರಿಲ್ 1 ರಿಂದಲೇ ಜಾರಿಗೆ ತರಲು ಕಲಬುರ್ಗಿ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿತ್ತು. ಆದರೆ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರ ವಾಪಸ್‌ ಪಡೆದಿದೆ.

ನೀರಿನ ಶುಲ್ಕ ಹೆಚ್ಚಳ
ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ ತೆರಿಗೆ ಪರಿಷ್ಕರಣೆ, ನೀರಿನ ಶುಲ್ಕ ಹೆಚ್ಚಳ ನಡೆಯುತ್ತಿದೆ. ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ಪುರಸಭೆ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಶುಲ್ಕ ಹೆಚ್ಚಿಸಲಾಗಿದೆ. 2019 ರಲ್ಲಿ ಪ್ರತಿ ತಿಂಗಳು
₹ 90 ಇದ್ದದ್ದನ್ನು ₹110 ಕ್ಕೆ ಏರಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆಗೆ ತಿಂಗಳು ₹ 300 ಕಟ್ಟುತ್ತಿದ್ದವರು ಈಗ ₹ 420 ಪಾವತಿಸಬೇಕು.

*
ಮಹಾನಗರದ ಪ್ರದೇಶದ ಭೂಮಿ ಮೌಲ್ಯದ ಆಧಾರದ ಮೇಲೆ ತೆರಿಗೆಯನ್ನು ಹೆಚ್ಚಿಸಲಾಗುತ್ತಿದೆ. 2015ರಿಂದ ಈವರೆಗೂ ನೀರಿನ ಕರ ಏರಿಸಿಲ್ಲ.
-ಸುರೇಶ ಇಟ್ನಾಳ, ಹುಬ್ಬಳ್ಳಿ–ಧಾರವಾಡ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.