ADVERTISEMENT

ಅತ್ಯಾಚಾರ ಪ್ರಕರಣ: ವಿಡಿಯೊ ಮಾಡಿದ ಆರೋಪಿಗಳು?

ಎಡಿಜಿಪಿ ಮೊಕ್ಕಾಂ l ಐವರು ವಶಕ್ಕೆ, ತೀವ್ರಗೊಂಡ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 23:15 IST
Last Updated 26 ಆಗಸ್ಟ್ 2021, 23:15 IST
ಆರೋಪಿಗಳ ಬಂಧನಕ್ಕೆ ಹೆಚ್ಚಿದ ಒತ್ತಡ
ಆರೋಪಿಗಳ ಬಂಧನಕ್ಕೆ ಹೆಚ್ಚಿದ ಒತ್ತಡ   

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗುಡ್ಡದಲ್ಲಿ ಮಂಗಳವಾರ ರಾತ್ರಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳು, ಅದನ್ನು ವಿಡಿಯೊ ಮಾಡಿಕೊಂಡಿದ್ದರು ಎಂದು ಗೊತ್ತಾಗಿದೆ.

‘ಅತ್ಯಾಚಾರದ ದೃಶ್ಯವನ್ನು ವಿಡಿಯೊ ಮಾಡಿಕೊಂಡಆರೋಪಿಗಳು ಹಣಕ್ಕಾಗಿ ಪೀಡಿಸಿದ್ದರು. ಹಣ ನೀಡದೇ ಇದ್ದಾಗ ಸಂತ್ರಸ್ತೆಯ ಸ್ನೇಹಿತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ. ಆದರೆ, ‘ಈ ಕುರಿತು ಯಾವುದೇ ವಿವರವನ್ನು ನೀಡಲು ಸಾಧ್ಯವಿಲ್ಲ’ ಎಂದು ಎಡಿಜಿಪಿ ಪ್ರತಾಪರೆಡ್ಡಿ ಪ್ರತಿಕ್ರಿಯಿಸಿದರು.

ಪ್ರಕರಣದ ತನಿಖೆಗಾಗಿ ಡಿಸಿಪಿ ಪ್ರದೀಪ್‌ಗುಂಟಿ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಿದ್ದು, ಮೇಲುಸ್ತುವಾರಿಗಾಗಿ ಎಡಿಜಿಪಿ ನಗರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಗುರುವಾರ ಪರಿಶೀಲನೆ ನಡೆಸಿ, ಯುವತಿ ಹಾಗೂ ಆಕೆಯ ಸ್ನೇಹಿತನಿಂದ ಹೇಳಿಕೆ ಪಡೆದಿದ್ದಾರೆ. ಸ್ಥಳದಲ್ಲಿ ಒಟ್ಟು 34 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ADVERTISEMENT

ತೀವ್ರಗೊಂಡ ಆಕ್ರೋಶ

ಅತ್ಯಾಚಾರ ಘಟನೆಯನ್ನು ಖಂಡಿಸಿ ನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಖಿಲ ಭಾರತ ಸಾಂಸ್ಕೃತಿಕ ಮಹಿಳಾ ಸಂಘಟನೆ, ಆಲ್‌ ಇಂಡಿಯಾ ಡೆಮಾಕ್ರಟಿಕ್ಸ್ ಸ್ಟೂಡೆಂಟ್ಸ್ ಆರ್ಗನೈಜೇಶನ್, ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್, ಮಹಿಳಾ ರಕ್ಷಣಾಪಡೆ, ಮಹಿಳಾ ಕಾಂಗ್ರೆಸ್, ಗಂಧದಗುಡಿ ಫೌಂಡೇಷನ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನನಗೆ ವರದಿ ಕೊಡಿ: ಬೊಮ್ಮಾಯಿ

‘ಗೃಹ ಸಚಿವ ಜ್ಞಾನೇಂದ್ರ ಹೇಳಿಕೆ ಬಗ್ಗೆ ತಮಗೆ ಸಹಮತ ಇಲ್ಲ’ ಎಂದಿರುವ ಮುಖ್ಯಮಂತ್ರಿ ಬೊಮ್ಮಾಯಿ, ಅತ್ಯಾಚಾರದ ಪ್ರಕರಣದ ತನಿಖೆಯ ಪ್ರಗತಿಯನ್ನು ತಮಗೆ ನೇರವಾಗಿ ವರದಿ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ತನಿಖೆಯ ಉಸ್ತುವಾರಿ ಹೊತ್ತಿರುವ ಎಡಿಜಿಪಿ ಪ್ರತಾಪ ರೆಡ್ಡಿ ಹಾಗೂ ಮೈಸೂರು ಕಮಿಷನರ್ ಚಂದ್ರಗುಪ್ತ ಅವರ ಜತೆ ನೇರವಾಗಿ ನಾನೇ ಮಾತನಾಡಿದ್ದೇನೆ. ಅಪರಾಧಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಚುರುಕುಗೊಳಿಸಿ, ತಪ್ಪಿತಸ್ಥರು ಯಾರೇ ಇದ್ದರೂ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವಂತೆ ಸೂಚನೆ ನೀಡಿದ್ದೇನೆ. ನನಗೆ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ’ ಎಂದರು.

‘ತನಿಖೆ ತೀವ್ರಗತಿಯಲ್ಲಿ ನಡೆದಿದೆ. ಸಂತ್ರಸ್ತೆ ಹಾಗೂ ಜೊತೆಗಿದ್ದ ಯುವಕ ಜತೆ, ಪೋಷಕರ ಜತೆ ಮಾತನಾಡಿ ಮಾಹಿತಿ ಕಲೆ ಹಾಕಲಾಗುತ್ತಿದೆ. ತಪ್ಪಿತಸ್ಥರನ್ನು ಸದೆಬಡಿಯುವ ಕೆಲಸ ಮಾಡಿಯೇ ತೀರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.