ADVERTISEMENT

ವಿದ್ಯಾರ್ಥಿನಿಯರ ಓಡಾಟ ನಿಷೇಧ- ಮೈಸೂರು ವಿ.ವಿ ಸುತ್ತೋಲೆ ವಾಪಸ್: ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 8:15 IST
Last Updated 28 ಆಗಸ್ಟ್ 2021, 8:15 IST
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ‘ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕಾರಣಕ್ಕೆ, ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಸಂಜೆ 6.30ರ ನಂತರ ವಿದ್ಯಾರ್ಥಿನಿಯರ ಓಡಾಟ ನಿಷೇಧಿಸಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿದ್ದ ಸುತ್ತೋಲೆ ವಾಪಸ್‌ ಪಡೆಯಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆ ಸುತ್ತೋಲೆ ವಾಪಸ್ ಪಡೆಯುವಂತೆ ಕುಲಪತಿ ಪ್ರೊ. ಹೇಮಂತ ಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳು ಸಾಮಾನ್ಯವಾಗಿ ಬಹಳ ವಿಶಾಲವಾಗಿರುತ್ತವೆ ಎಂಬುದೇನೋ ನಿಜ. ಹಾಗೆಂದು, ವಿದ್ಯಾರ್ಥಿನಿಯರು ಓಡಾದಂತೆ ನಿರ್ಬಂಧ ಹೇರುವುದು ಸರಿಯಲ್ಲ. ಅದರ ಬದಲಿಗೆ ರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತ ಕ್ಯಾಂಪಸ್ ರೂಪಿಸಬೇಕು’ ಎಂದು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಅವರು ಸೂಚಿಸಿದರು.

ADVERTISEMENT

‘ಅತ್ಯಾಚಾರ ಘಟನೆ ಖಂಡನೀಯ. ಈ ಘಟನೆಯ ಕಾರಣಕ್ಕೆ ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಬೇಡ. ಅವರ ಸ್ವಾತಂತ್ರ್ಯಕ್ಕೆ ಚ್ಯುತಿಯಾಗದಂತೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹೆಚ್ಚು ನಿಗಾ ವಹಿಸಬೇಕು. ತಂತ್ರಜ್ಞಾನ ಬಳಕೆ ಮಾಡಿಕೊಂಡು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ವ್ಯಾಪಕ ನಿಗಾ ಇರಿಸುವುದರ ಜತೆಗೆ, ಭದ್ರತಾ ಸಿಬ್ಬಂದಿಯಿಂದ ಪೆಟ್ರೋಲಿಂಗ್ ಮಾಡಬೇಕು. ಅಗತ್ಯವಾದ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಕಾನೂನು-ಸುವವಸ್ಥೆ ಕಾಪಾಡಲು ನಿಗಾ ಇಟ್ಟಿರಬೇಕು. ಈ ಬಗ್ಗೆ ಕುಲಪತಿಗಳಿಗೆ ನಿರ್ದೇಶನ ನೀಡಲಾಗುವುದು’ ಎಂದರು.

ಕುಲಪತಿಗಳ ಜತೆ‌ ಚರ್ಚೆ: ‘ಲಭ್ಯವಿರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಭದ್ರತೆ ಮತ್ತು ನಿಗಾ ಹೆಚ್ಚಿಸಲು ಏನೇನು ಮಾಡಬಹುದು ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುತ್ತೇನೆ. ಸಂಬಂಧಿತ ಇಲಾಖೆ ಹಾಗೂ ಎಲ್ಲ ಕುಲಪತಿಗಳ ಜತೆ ಚರ್ಚೆ ನಡೆಸುತ್ತೇನೆ’ ಎಂದೂ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.