ಮೈಸೂರು: ಅಂಬಾವಿಲಾಸ ಅರಮನೆಯ ಮುಂಭಾಗ ಗುರುವಾರ ರಾತ್ರಿ ಬಲೂನ್‌ಗೆ ಹೀಲಿಯಂ ತುಂಬುವ ಸಿಲಿಂಡರ್ ಸ್ಫೋಟವಾದ ಘಟನೆಯಲ್ಲಿ ಗಾಯಗೊಂಡು ಇಲ್ಲಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಗಾಯಗೊಂಡವರ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅನಿರೀಕ್ಷಿತ ಘಟನೆ ಇದು. ಗಾಯಗೊಂಡಿರುವ ನಾಲ್ವರಲ್ಲಿ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಅವರೆಲ್ಲರೂ ಪ್ರವಾಸಕ್ಕೆ ಬಂದಿದ್ದವರು. ಮೃತಪಟ್ಟ ವ್ಯಕ್ತಿಯು, ಬಲೂನು ಮಾರಿ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುವುದಕ್ಕೆ ಬಂದಿದ್ದರು. ಇಂತಹ ಘಟನೆಗಳು ಪಾಠ. ಇಂಥದು ಮರುಕಳಿಸದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡಬೇಕಾಗುತ್ತದೆ’ ಎಂದು ಹೇಳಿದರು.
‘ಹಿಂದಿನಿಂದಲೂ ಕೆಲವು ಋತುವಿನಲ್ಲಿ ಬಲೂನು ಮಾರುವುದಕ್ಕೆ ಬೇರೆ ಕಡೆಯಿಂದ ವ್ಯಾಪಾರಿಗಳು ಬರುತ್ತಾರೆ. ಹಿಂದೆ ಇಂತಹ ಘಟನೆ ನಡೆದಿರಲಿಲ್ಲ. ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಇಂತಹ ಘಟನೆಗಳು ನಡೆದಾಗ ಎನ್‌ಐಎ ಸಹಜವಾಗಿಯೇ ಮಾಹಿತಿ ಪಡೆದುಕೊಳ್ಳುತ್ತದೆ. ಅವರು ತನಿಖೆ ನಡೆಸಲಿ, ನಮ್ಮದೇನೂ ಅಭ್ಯಂತರವಿಲ್ಲ. ಗಾಯಗೊಂಡವರ ಚಿಕಿತ್ಸೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.
‘ಮೃತ ಸಲೀಂ ಹೊಟ್ಟೆಪಾಡಿಗಾಗಿ ಬಲೂನು, ಐಸ್‌ಕ್ಯಾಂಡಿ ಮಾರಾಟ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದ. ಅವನೊಂದಿಗೆ ಇಬ್ಬರು ಬಂದಿದ್ದರು. ಅವರದ್ದೂ ಅದೇ ಕೆಲಸವಾಗಿತ್ತು. ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಕೆ.ಆರ್. ಆಸ್ಪತ್ರೆಯ ಡೀನ್ ಡಾ.ದಾಕ್ಷಾಯಿಣಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಜೊತೆಗಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.