
ಶಿವಮೊಗ್ಗ: ಹಿರಿಯ ಸಾಹಿತಿ, ಜಿಲ್ಲೆಯ ಸಾಗರದ ನಿವಾಸಿ ನಾ.ಡಿಸೋಜಾ (87) ವಯೋಸಹಜ ಅನಾರೋಗ್ಯದಿಂದ ಭಾನುವಾರ ರಾತ್ರಿ 7.50ಕ್ಕೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ ಫಿಲೋಮಿನಾ, ಪುತ್ರಿ ಶೋಭಾ, ಪುತ್ರರಾದ ನವೀನ್ ಹಾಗೂ ಸಂತೋಷ್ ಇದ್ದಾರೆ. ‘ಮೃತರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನದ ನಂತರ ಸಾಗರದ ನೆಹರೂ ನಗರದ 2ನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಮಂಗಳವಾರ ಸಂಜೆ 4ಕ್ಕೆ ಸಾಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಪುತ್ರ ನವೀನ್ ಡಿಸೋಜಾ ತಿಳಿಸಿದ್ದಾರೆ.
ಅಭಿವೃದ್ಧಿ, ಮುಳುಗಡೆ ಹಾದಿಯಲ್ಲಿ ಸಹ್ಯಾದ್ರಿಯ ಒಡಲ ಪಲ್ಲಟ, ಮಲೆನಾಡಿನ ಜನರ ಬೇಗುದಿಯನ್ನು ಬರಹದಲ್ಲಿ ಕಟ್ಟಿಕೊಟ್ಟು ನಾಡಿನ ಮುಂದಿಟ್ಟಿದ್ದ ನಾ.ಡಿಸೊಜಾ (ನಾರ್ಬರ್ಟ್ ಡಿಸೋಜಾ) ಮೂಲತಃ ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರದಿಂದ ಸಾಗರಕ್ಕೆ ಶಿಕ್ಷಕ ವೃತ್ತಿ ಮಾಡಲು ಬಂದಿದ್ದ ಫಿಲಿಪ್ ಡಿಸೋಜಾ ಹಾಗೂ ರೂಪಿನಾ ಬಾಯಿ ದಂಪತಿ ಪುತ್ರ. 1937ರ ಜೂನ್ 6ರಂದು ಸಾಗರದಲ್ಲಿ ಜನಿಸಿದ ಅವರು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆದಿದ್ದರು.
ನಂತರ ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್, ದ್ವಿತೀಯ ದರ್ಜೆ ಹಾಗೂ ಪ್ರಥಮ ದರ್ಜೆ ಕ್ಲರ್ಕ್ ಆಗಿ ಕಾರ್ಗಲ್‌ನ ಶರಾವತಿ ಯೋಜನೆ, ಮಾಸ್ತಿಕಟ್ಟೆ, ತೀರ್ಥಹಳ್ಳಿ ಹಾಗೂ ಸಾಗರದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು.
ಬಾಲ್ಯದಲ್ಲಿ ತಾಯಿ ರೂಪಿನಾ ಹೇಳುತ್ತಿದ್ದ ಜನಪದ ಹಾಡು, ಕತೆಗಳು ಡಿಸೋಜ ಅವರ ಮೇಲೆ ಪ್ರಭಾವ ಬೀರಿದ್ದವು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಹೋದರ ನರಸಿಂಹಾಚಾರ್ ಶಾಲೆಯಲ್ಲಿ ಆಕರ್ಷಕವಾಗಿ ಬೋಧಿಸುತ್ತಿದ್ದ ರೀತಿ, ಕಾಲೇಜಿನಲ್ಲಿ ಗುರು ಡಾ. ಜಿ.ಎಸ್.ಶಿವರುದ್ರಪ್ಪ ಅವರ ಪಾಂಡಿತ್ಯ ನಾ. ಡಿಸೋಜ ಅವರನ್ನು ಪ್ರಭಾವಿಸಿತ್ತು.
ನಾ. ಡಿಸೋಜ ಅವರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, ಸುಮಾರು 500 ಕಥೆಗಳು, ಹತ್ತಾರು ನಾಟಕಗಳು, ರೇಡಿಯೋ ನಾಟಕಗಳು, ಅನೇಕ ಪತ್ರಿಕಾ ಲೇಖನಗಳು ಹೀಗೆ ವಿಶಾಲ ವ್ಯಾಪ್ತಿಯಲ್ಲಿ ಬರೆದಿದ್ದರು. ಇವರ ‘ಮುಳುಗಡೆಯ ಊರಿಗೆ ಬಂದವರು’ ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಸಂದಿತ್ತು. ‘ದ್ವೀಪ’ ಮತ್ತು ‘ಕಾಡಿನ ಬೆಂಕಿ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿವೆ. 2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಅವರ ಜೀವನಚರಿತ್ರೆ ‘ಮಲೆನಾಡಿಗ’ 2012ರಲ್ಲಿ ಪ್ರಕಟವಾಗಿದೆ.
ನಾ ಡಿಸೋಜ ಅವರ ಕತೆಗಳು ಪಾಟೀಲ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ಮೊದಲು ಪ್ರಕಟಗೊಂಡು ಮುಂದೆ ಎಲ್ಲ ಪತ್ರಿಕೆಗಳಲ್ಲೂ ಬಹುಬೇಡಿಕೆ ಪಡೆದವು. ಡಿಸೋಜ ಅವರ ಹಲವಾರು ಸಣ್ಣಕತೆಗಳು ಕೊಂಕಣಿ, ಮಲಯಾಳ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದ ವೇಳೆ ಮುಳುಗಡೆಯಿಂದಾಗಿ ಶರಾವತಿ ಕಣಿವೆಯಲ್ಲಿ ಆದ ತಲ್ಲಣಗಳ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾ.ಡಿಸೋಜಾ ಅವರು ಅದನ್ನು ಕಥೆ, ಕಾದಂಬರಿಗಳ ಮೂಲಕ ಕಟ್ಟಿಕೊಟ್ಟಿದ್ದರು. ‘ಲಿಂಗನಮಕ್ಕಿ ಅಣೆಕಟ್ಟೆ ಜನರ ಜೀವನವನ್ನು ಸುಧಾರಿಸುತ್ತದೆ ಎಂದು ನಂಬಲಾಗಿತ್ತು. ಆದರೆ, ಅಂಥದ್ದೇನೂ ಆಗಲಿಲ್ಲ. 112 ಗ್ರಾಮಗಳು ಮುಳುಗಡೆಯಾಗಿದ್ದು, ಸುಮಾರು 90,000 ಜನರು ಸ್ಥಳಾಂತರಗೊಂಡಿದ್ದಾರೆ. ನಾನು ಆ ಜನರ ಸಂಕಷ್ಟಗಳನ್ನು ಆಲಿಸಿದೆ ಮತ್ತು ಅವರು ನನಗೆ ಕಾದಂಬರಿ ಮತ್ತು ಸಣ್ಣ ಕಥೆಗಳನ್ನು ಬರೆಯಲು ಪ್ರೇರೇಪಿಸಿದರು’ ಎಂದು ನಾ.ಡಿಸೋಜಾ ಹೇಳುತ್ತಿದ್ದರು.
‘ಮುಳುಗಡೆ ಸಂತ್ರಸ್ತರ ಅಂದಿನ ಸಮಸ್ಯೆಗಳು ಈಗಲೂ ಬಗೆಹರಿದಿಲ್ಲ. ನ್ಯಾಯಯುತ ಪರಿಹಾರ ಹಾಗೂ ಪರ್ಯಾಯ ಜಮೀನು ಪಡೆಯಲು ಹಲವರು ದಶಕಗಳ ನಂತರವೂ ಇನ್ನೂ ಹೋರಾಟ ಮಾಡುತ್ತಿದ್ದಾರೆ’ ಎಂದು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.